Thursday, November 26, 2026
Menu

ಕಳಪೆ ಜೋಳದ ಬೀಜ ಬಿತ್ತನೆ: ಸಾವಿರಾರು ಹೆಕ್ಟೇರ್ ಬೆಳೆ ಹಾನಿ, ಆತಂಕದಲ್ಲಿ ಬಳ್ಳಾರಿ ರೈತರು

ಉದಯಕಾಲ ನ್ಯೂಸ್, ಬಳ್ಳಾರಿ: ಈಗಾಗಲೇ ಮಳೆ ಕೊರತೆ ಹಾಗೂ ನೀರಾವರಿ ಸಂಕಷ್ಟದಿಂದ ಕಂಗೆಟ್ಟಿರುವ ಬಳ್ಳಾರಿ ಜಿಲ್ಲೆಯ ಅನ್ನದಾತರಿಗೆ ಈಗ ಕಳಪೆ ಬಿತ್ತನೆ ಬೀಜದ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯ ಬಳ್ಳಾರಿ, ಕುರುಗೋಡು, ಸಿರುಗುಪ್ಪ ಹಾಗೂ ಕಂಪ್ಲಿ ತಾಲೂಕುಗಳಲ್ಲಿ ಎರಡನೇ ಬೆಳೆಗೆ ಖಾಸಗಿ ಕಂಪನಿಯೊಂದರಿಂದ ವಿತರಿಸಲಾದ ಬಿಳಿ ಜೋಳದ ಬೀಜಗಳು ಕಳಪೆ ಹಾಗೂ ಕಲಬೆರಕೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳದ ಬೆಳೆ ಸಂಪೂರ್ಣವಾಗಿ ಹಾನಿಯಾಗುವ ಆತಂಕ ಎದುರಾಗಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈ ಹೈಬ್ರಿಡ್ ಬಿಳಿ ಜೋಳದ ಬೀಜಗಳನ್ನು ಬಿತ್ತನೆ ಮಾಡಿದ್ದರು. ಆದರೆ, ಜೋಳದ ಗಿಡಗಳು ಎತ್ತರಕ್ಕೆ ಬೆಳೆದಿದ್ದರೂ, ಫಸಲು ಬಿಡುವ ಹಂತದಲ್ಲಿ ಸಮರ್ಪಕವಾಗಿ ತೆನೆ ಕಟ್ಟಿಲ್ಲ. ಕೆಲವೆಡೆ ತೆನೆ ಬಂದಿದ್ದರೂ ಅದರಲ್ಲಿ ಕಾಳುಗಳೇ ಮೂಡದೆ ಜೊಳ್ಳಾಗಿದ್ದು, ನಿರೀಕ್ಷಿತ ಫಸಲು ಕೈಸೇರದಂತಾಗಿದೆ. ಇದರಿಂದ ಒಟ್ಟಾರೆ ಇಳುವರಿಯಲ್ಲಿ ಶೇ. 50ರಷ್ಟು ಭಾರಿ ಕುಸಿತವಾಗುವ ಸಾಧ್ಯತೆ ಇದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.

ನೀರಿನ ಅಭಾವದ ನಡುವೆ ಜೋಳವನ್ನು ನಂಬಿದ್ದ ರೈತರಿಗೆ ದ್ರೋಹ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಸಮಸ್ಯೆಯಿಂದ ಕಾಲುವೆಗಳಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ, ಈ ಬಾರಿ ಹೆಚ್ಚು ನೀರು ಬೇಡುವ ಭತ್ತ ಹಾಗೂ ಮೆಣಸಿನಕಾಯಿ ಬೆಳೆಯಲು ರೈತರು ಹಿಂದೇಟು ಹಾಕಿದ್ದರು. ಬದಲಾಗಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಜೋಳವನ್ನು ಆಯ್ಕೆ ಮಾಡಿಕೊಂಡಿದ್ದರು. ಮಳೆ ಅಭಾವ ಹಾಗೂ ವೇದಾವತಿ ನದಿಯಲ್ಲಿ ನೀರಿಲ್ಲದ ಕಾರಣ, ರೈತರು ತಮ್ಮ ಕೊಳವೆಬಾವಿಗಳ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು ಕಷ್ಟಪಟ್ಟು ಬೆಳೆ ಬೆಳೆದಿದ್ದರು.

ಕಳೆದ ವರ್ಷ ಇದೇ ಕಂಪನಿಯ ಹೈಬ್ರಿಡ್ ಜೋಳದ ಬೀಜ ಬಿತ್ತನೆ ಮಾಡಿದ್ದ ರೈತರಿಗೆ ಎಕರೆಗೆ ಸುಮಾರು 35 ಕ್ವಿಂಟಲ್ ಬಂಪರ್ ಇಳುವರಿ ಬಂದಿತ್ತು. ಅದೇ ನಂಬಿಕೆಯ ಮೇಲೆ ಈ ಬಾರಿಯೂ ಬಳ್ಳಾರಿಯ ಖಾಸಗಿ ಏಜೆನ್ಸಿಯೊಂದರಿಂದ ಅದೇ ತಳಿಯ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದರು. ಬಿತ್ತನೆಯಾದ ಮೊದಲ 45 ದಿನಗಳವರೆಗೆ ಬೆಳೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಆದರೆ ಬೆಳೆ ತೆನೆ ಕಟ್ಟುವ ಹಂತಕ್ಕೆ ಬಂದಾಗ, ಉತ್ತಮ ಗುಣಮಟ್ಟದ ಬೀಜದೊಂದಿಗೆ ಕಳಪೆ ಬೀಜಗಳನ್ನು ಮಿಶ್ರಣ ಮಾಡಿ ಪ್ಯಾಕಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.

ಎಕರೆಗೆ ₹30 ಸಾವಿರ ಖರ್ಚು; ಮಾರಾಟಗಾರರ ಉಡಾಫೆ ಉತ್ತರಕ್ಕೆ ರೈತರ ಆಕ್ರೋಶ

ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಕಾರ್ಮಿಕರ ವೆಚ್ಚ ಸೇರಿ ಪ್ರತಿ ಎಕರೆಗೆ ಸುಮಾರು ₹30 ಸಾವಿರ ಖರ್ಚು ಮಾಡಿರುವ ರೈತರು ಈಗ ದಿಕ್ಕು ತೋಚದಂತಾಗಿದ್ದಾರೆ.ಸಾಲಸೋಲ ಮಾಡಿ ಹೆಚ್ಚಿನ ನಿರೀಕ್ಷೆಯೊಂದಿಗೆ ಜೋಳ ಬಿತ್ತನೆ ಮಾಡಿದ್ದೇವೆ. ಎಕರೆಗೆ ₹30 ಸಾವಿರ ಖರ್ಚು ಮಾಡಿದ್ದರೂ ಕಳಪೆ ಬೀಜದಿಂದ ಬೆಳೆ ಹಾಳಾಗಿದೆ. ಬೀಜ ಮಾರಾಟ ಮಾಡಿದ ಅಂಗಡಿಯವರನ್ನು ಪ್ರಶ್ನಿಸಿದರೆ ಬೇಕಿದ್ದರೆ ದೂರು ನೀಡಿ ಎಂದು ಉಡಾಫೆಯಾಗಿ ಉತ್ತರಿಸುತ್ತಾರೆ. ನಕಲಿ ಬೀಜ ಪೂರೈಸಿದ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡು, ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬಳ್ಳಾರಿ ತಾಲ್ಲೂಕಿನ ಯರ್ರಗುಡಿ ಗ್ರಾಮದ ರೈತ ರಾಮಾಂಜಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪ್ಲಿ ಭಾಗದ ರೈತ ಬಿ.ವಿ. ಗೌಡ ಅವರೂ ಇದೇ ನೋವು ತೋಡಿಕೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮಾಡಿದ ವೆಚ್ಚವೆಲ್ಲ ವ್ಯರ್ಥವಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ರಾಯಚೂರು ಕೃಷಿ ವಿವಿ ತಂಡದಿಂದ ಪರಿಶೀಲನೆ; ಸರ್ಕಾರಿ ಬೀಜವಲ್ಲ ಎಂದ ಇಲಾಖೆ

ಬಳ್ಳಾರಿ ತಾಲ್ಲೂಕಿನ ರೂಪನಗುಡಿ, ಮೋಕ, ಕುರುಗೋಡು ಹಾಗೂ ಕೋಳೂರು ಹೋಬಳಿಗಳ ರೈತರು ಹೈಟೆಕ್ ತಳಿಯ ಜೋಳದ ಬೆಳೆ ಹಾನಿಯಾಗುತ್ತಿರುವ ಕುರಿತು ಕೃಷಿ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಬಳ್ಳಾರಿ ಮತ್ತು ಕುರುಗೋಡು ತಾಲೂಕುಗಳಲ್ಲಿ ಜೋಳ ಬಿತ್ತನೆಯಾಗಿರುವ ಒಟ್ಟು ಪ್ರದೇಶದ ಪೈಕಿ ಶೇ. 20ರಷ್ಟು ಪ್ರದೇಶದಲ್ಲಿ ಕಳಪೆ ಬೀಜದ ಸಮಸ್ಯೆ ಕಂಡುಬಂದಿರುವುದಾಗಿ ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ನಡೆಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಅವರು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿರುವ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಪ್ರಭುರಾಜ ಎ. ಅವರು ವಿಜ್ಞಾನಿಗಳ ವಿಶೇಷ ತಂಡ ರಚಿಸಿ ಜಮೀನುಗಳ ಪರಿಶೀಲನೆಗೆ ಆದೇಶಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, “ಸರ್ಕಾರದಿಂದ ರೈತರಿಗೆ ವಿತರಿಸಿದ ಬೀಜದಿಂದ ಈ ಸಮಸ್ಯೆ ಉಂಟಾಗಿಲ್ಲ. ಖಾಸಗಿ ಏಜೆನ್ಸಿಯಿಂದ ಖರೀದಿಸಿದ ಬೀಜದಲ್ಲಿ ಸಮಸ್ಯೆ ಕಂಡುಬಂದಿದೆ. ತಜ್ಞರ ತಂಡದ ವೈಜ್ಞಾನಿಕ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಸಂಸದ ತುಕಾರಾಂ ಭರವಸೆ

ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಿರುವ ಬಳ್ಳಾರಿ ಸಂಸದ ಇ. ತುಕಾರಾಂ ಅವರು, ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಬೆಂಗಳೂರಿನ ಕೃಷಿ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಜಿಲ್ಲೆಯ ಶಾಸಕರೊಂದಿಗೆ ಸೇರಿ ಈ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು. ಕಳಪೆ ಬೀಜದಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸಿರುವ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
#UdayakalaNews #BallariFarmers #JowarCropLoss #AdulteratedSeeds #FakeSeeds #KarnatakaAgriculture #BallariNews #Kurugodu #Siruguppa #Kampli #MPTukaram #RaichurAgriUniversity #FarmersDistress #CropCompensation #KannadaNews

Related Posts

Leave a Reply

Your email address will not be published. Required fields are marked *