Thursday, November 26, 2026
Menu

ಮಂಗಳೂರಿನಲ್ಲಿ ಡೆಲಾಯ್ಟ್ ಇಂಡಿಯಾ ನೂತನ ಕಚೇರಿ ಆರಂಭ: 1,000ಕ್ಕೂ ಹೆಚ್ಚು ಉದ್ಯೋಗ ನೀಡುವ ಗುರಿ!

ಉದಯಕಾಲ ನ್ಯೂಸ್, ಮಂಗಳೂರು: ಜಾಗತಿಕ ಮಟ್ಟದ ಅಗ್ರಗಣ್ಯ ಕನ್ಸಲ್ಟಿಂಗ್ ಸಂಸ್ಥೆಯಾದ ಡೆಲಾಯ್ಟ್ ಇಂಡಿಯಾ ಮಂಗಳೂರಿನ ಕೊಟ್ಟಾರ ಚೌಕಿಯ ವರ್ಕ್‌ವರ್ಕ್ ಟ್ರಯಾಂಗಲ್ ನಲ್ಲಿ ತನ್ನ ನೂತನ ಕಚೇರಿಯನ್ನು ಆರಂಭಿಸುವ ಮೂಲಕ ಕರಾವಳಿ ಕರ್ನಾಟಕಕ್ಕೆ ಕಾಲಿಟ್ಟಿದೆ. ಇದು ದೇಶದಲ್ಲಿ ಡೆಲಾಯ್ಟ್‌ನ 27ನೇ ಕಚೇರಿಯಾಗಿದ್ದು, ಕರ್ನಾಟಕದಲ್ಲಿ ಬೆಂಗಳೂರಿನ ನಂತರ ತೆರೆಯಲಾದ ಮೊದಲ ಕಚೇರಿಯಾಗಿದೆ.

ಕಚೇರಿ ಉದ್ಘಾಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡೆಲಾಯ್ಟ್ ಸೌತ್ ಏಷ್ಯಾದ ಸಿಇಒ ರೋಮಲ್ ಶೆಟ್ಟಿ, ಮಂಗಳೂರಿನ ಕಚೇರಿಯ ಭವಿಷ್ಯದ ಯೋಜನೆಗಳು, ಉದ್ಯೋಗಾವಕಾಶಗಳು ಹಾಗೂ ಪ್ರಾಜೆಕ್ಟ್ ಭಾರತ್ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
250 ಉದ್ಯೋಗಿಗಳೊಂದಿಗೆ ಆರಂಭ – 1,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಗುರಿ: ಪ್ರಸ್ತುತ ಮಂಗಳೂರು ಕಚೇರಿಯಲ್ಲಿ 250 ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು-ಮೂರು ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 1,000ಕ್ಕೂ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಆರಂಭದಲ್ಲಿ ಕರಾವಳಿ ಮೂಲದವರೇ ಆದ ಸುಮಾರು 50 ಅನುಭವಿ ಉದ್ಯೋಗಿಗಳನ್ನು ಬೆಂಗಳೂರಿನಿಂದ ಇಲ್ಲಿಗೆ ವರ್ಗಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು, ಉಡುಪಿ, ಮಣಿಪಾಲ ಸೇರಿದಂತೆ ಸ್ಥಳೀಯ ಕಾಲೇಜುಗಳಿಂದ ಹೊಸ ಪದವೀಧರರನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಯಾವೆಲ್ಲಾ ವಿಭಾಗಗಳಲ್ಲಿ ಕೆಲಸ?

ಇಲ್ಲಿ ಕೃತಕ ಬುದ್ಧಿಮತ್ತೆ (AI), ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಕನ್ಸಲ್ಟಿಂಗ್, ತೆರಿಗೆ (Tax), ರಿಸ್ಕ್ ಅಡ್ವೈಸರಿ, ಎಂಜಿನಿಯರಿಂಗ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಾಫ್ಟ್‌ವೇರ್) ಹಾಗೂ ಕಾಮರ್ಸ್ ವಿಭಾಗದ ಪದವೀಧರರಿಗೆ ವಿಪುಲ ಉದ್ಯೋಗಾವಕಾಶಗಳಿವೆ.
ಮಂಗಳೂರಿನಲ್ಲಿ ಕಚೇರಿ ಆರಂಭಿಸಿರುವುದು ನನಗೆ ವೈಯಕ್ತಿಕವಾಗಿ ಖುಷಿ ತಂದಿದೆ. ನನ್ನ ಕುಟುಂಬದ ಮೂಲ ಕರಾವಳಿ ಕರ್ನಾಟಕ (ನಾನು ಕುಂದಾಪುರ ಕನ್ನಡ ಮಾತನಾಡುತ್ತೇನೆ). ಹಾಗಾಗಿ ಇದು ನನಗೆ ತವರಿಗೆ ಮರಳಿದಂತಹ ಅನುಭವ ನೀಡುತ್ತಿದೆ” ಎಂದು ರೋಮಲ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.

ಡೆಲಾಯ್ಟ್‌ನಲ್ಲಿ ಕಾರ್ಯನಿರ್ವಹಿಸುವವರ ಸರಾಸರಿ ವಯಸ್ಸು 28 ವರ್ಷ. ಇಲ್ಲಿನ ಪ್ರತಿಭಾವಂತ ಯುವಜನರು ಉದ್ಯೋಗ ಅರಸಿ ತಮ್ಮ ಮನೆ, ಕುಟುಂಬ ಬಿಟ್ಟು ಬೆಂಗಳೂರು ಅಥವಾ ಮುಂಬೈನಂತಹ ಮಹಾನಗರಗಳ ಪಿಜಿಗಳಲ್ಲಿ (PG) ವಾಸಿಸುವ ಪರಿಸ್ಥಿತಿ ಇತ್ತು. ಈಗ ನಾವು ವಿಶ್ವದರ್ಜೆಯ ಕೆಲಸವನ್ನೇ ಅವರ ಮನೆ ಬಾಗಿಲಿಗೆ ತಂದಿದ್ದೇವೆ. ಇದರಿಂದ ಅವರು ಕುಟುಂಬದೊಂದಿಗೆ ಇದ್ದುಕೊಂಡೇ ಭಾರತ ಮತ್ತು ಜಾಗತಿಕ ಗ್ರಾಹಕರಿಗಾಗಿ ಕೆಲಸ ಮಾಡಬಹುದು ಎಂದರು.

ಪ್ರಾಜೆಕ್ಟ್ ಭಾರತ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ

2 ಮತ್ತು 3ನೇ ಹಂತದ ನಗರಗಳಿಗೆ ಆದ್ಯತೆ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪಾತ್ರ ದೊಡ್ಡದಿದೆ. ಅವುಗಳಿಗೆ ತಂತ್ರಜ್ಞಾನ, ಡಿಜಿಟಲೀಕರಣ ಹಾಗೂ ವೃತ್ತಿಪರ ಸಲಹೆ ನೀಡಲು ಡೆಲಾಯ್ಟ್ ಪ್ರಾಜೆಕ್ಟ್ ಭಾರತ್ ಅಡಿ ಮಂಗಳೂರು, ಕೊಯಮತ್ತೂರು, ಲಕ್ನೋ, ಇಂದೋರ್, ಭುವನೇಶ್ವರದಂತಹ 2 ಮತ್ತು 3ನೇ ಹಂತದ ನಗರಗಳಲ್ಲಿ ಕಚೇರಿಗಳನ್ನು ತೆರೆಯುತ್ತಿದೆ.
ಇಸ್ರೋ (ISRO) ಮತ್ತು ನಾಸಾದಂತಹ (NASA) ಸಂಸ್ಥೆಗಳೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯಿಕ ಕ್ಷೇತ್ರದಲ್ಲಿ ಡೆಲಾಯ್ಟ್ ಕೆಲಸ ಮಾಡುತ್ತಿದೆ. ಉಪಗ್ರಹ ತಂತ್ರಜ್ಞಾನದ ಮೂಲಕ ಭೂ ಒತ್ತುವರಿ ಪತ್ತೆ, ಆಸ್ತಿ ತೆರಿಗೆ ನಿರ್ವಹಣೆ, ರಿಫೈನರಿಗಳಲ್ಲಿ ಅನಿಲ ಸೋರಿಕೆ ಪತ್ತೆ ಹಾಗೂ ನದಿ ನೀರಿನ ಗುಣಮಟ್ಟ ಪರಿಶೀಲಿಸುವಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ಸೌರ ಮತ್ತು ಪವನ ವಿದ್ಯುತ್ ಕ್ಷೇತ್ರದಲ್ಲೂ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್ ಹಾಗೂ ಕಾಮರ್ಸ್ ಕಾಲೇಜುಗಳಿವೆ. ಉತ್ತಮ ಜೀವನಮಟ್ಟ, ಕಡಿಮೆ ಪ್ರಯಾಣದ ಅವಧಿ ಮತ್ತು ‘ಬಿಯಾಂಡ್ ಬೆಂಗಳೂರು’ ನೀತಿಯಡಿ ರಾಜ್ಯ ಸರ್ಕಾರ ನೀಡಿದ ಸಂಪೂರ್ಣ ಸಹಕಾರದಿಂದ ಮಂಗಳೂರು ತಂತ್ರಜ್ಞಾನ ಹಾಗೂ ನಾವೀನ್ಯತೆಯ ಕೇಂದ್ರವಾಗಿ ಬೆಳೆಯುತ್ತಿದೆ.ಈ ಹಿಂದೆ ನಡೆದ ಟೈಕಾನ್ ಸಮ್ಮೇಳನ ಹಾಗೂ ಸ್ಥಳೀಯ ಉದ್ಯಮಿಗಳ ಒತ್ತಾಸೆಯೂ ಈ ಕಚೇರಿ ಆರಂಭಕ್ಕೆ ಪ್ರಮುಖ ಕಾರಣವಾಯಿತು ಎಂದು ರೋಮಲ್ ಶೆಟ್ಟಿ ತಿಳಿಸಿದರು.
#UdayakalaNews #DeloitteIndia #Mangaluru #SiliconBeach #BeyondBengaluru #RomalShetty #PriyankKharge #SpaceTech #ISRO #NASA #RenewableEnergy #ITJobsMangaluru #CoastalKarnataka #TechHub #KannadaNews

Related Posts

Leave a Reply

Your email address will not be published. Required fields are marked *