ಉದಯಕಾಲ ನ್ಯೂಸ್, ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಕಾನೂನು ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಈಗಾಗಲೇ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರ ವಿರುದ್ಧ ಈಗ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಮತ್ತು ಬೆದರಿಕೆ ಹಾಕಿದ ಗಂಭೀರ ಆರೋಪದ ಮೇಲೆ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಈ ಹಿಂದೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ದೂರು ದಾಖಲಿಸಿದ್ದ 40 ವರ್ಷದ ಸಂತ್ರಸ್ತ ಮಹಿಳೆಯೇ ಈಗ ಈ ಹೊಸ ದೂರನ್ನು ನೀಡಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಪ್ರಕರಣದಲ್ಲಿ ತಾವು ಸಾಕ್ಷ್ಯ ನುಡಿಯದಂತೆ ತಡೆಯಲು ಹಾಗೂ ಸಾರ್ವಜನಿಕವಾಗಿ ತಮ್ಮನ್ನು ಅವಮಾನಿಸಿ ಮಾನಸಿಕ ಕಿರುಕುಳ ನೀಡುವ ಉದ್ದೇಶದಿಂದ ಶಾಸಕರು ಈ ರೀತಿ ನಡೆದುಕೊಂಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಗುರುತು ಪತ್ತೆಯಾಗುವಂತೆ ಭಾಷಣ
ಸಂತ್ರಸ್ತೆ ನೀಡಿರುವ ದೂರಿನ ವಿವರಗಳ ಪ್ರಕಾರ, ಇತ್ತೀಚೆಗೆ ನಡೆದ ಬಿಜೆಪಿ ಕಚೇರಿ ಉದ್ಘಾಟನೆಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಶಾಸಕ ಮುನಿರತ್ನ ಅವರು, ತಮ್ಮ ಹಾಗೂ ತಮ್ಮ ಕುಟುಂಬದ ವೈಯಕ್ತಿಕ ವಿವರಗಳನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮ ಗುರುತು ಸುಲಭವಾಗಿ ಪತ್ತೆಯಾಗುವಂತೆ ಮಾತನಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರ ಹೆಸರು, ವಿಳಾಸ ಅಥವಾ ಅವರ ಗುರುತು ಪತ್ತೆಯಾಗುವಂತಹ ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ. ಹಾಗಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ತಮ್ಮ ಘನತೆ ಮತ್ತು ಗೌಪ್ಯತೆಗೆ ಧಕ್ಕೆ ತಂದಿದೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಲಾದ ಮುನಿರತ್ನ ಅವರ ವಿವಾದಾತ್ಮಕ ಹೇಳಿಕೆಗಳು
ಸಾರ್ವಜನಿಕ ಸಭೆಯಲ್ಲಿ ಶಾಸಕ ಮುನಿರತ್ನ ಅವರು ತಮ್ಮನ್ನು ನೇರವಾಗಿ ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶಾಸಕರ ಭಾಷಣದ ಸಾಲುಗಳನ್ನು ಉಲ್ಲೇಖಿಸಿರುವ ಅವರು ಸುಳ್ಳು ಕೇಸ್ ಹಾಕಿಸಿ ಒಂದು ಹೆಣ್ಣು ಹೆಣ್ಣಾಗಿ ಬದುಕಬೇಕು. ಐದು ವರ್ಷಗಳ ಹಿಂದೆ ಘಟನೆ ನಡೆದಿದೆ ಎಂದು 52 ಕಿಲೋಮೀಟರ್ ದೂರದ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಮ್ಮೆ ಅತ್ಯಾಚಾರ ಆದ ಮೇಲೆ ಮತ್ತೆ ಕಾರು, ವಿಧಾನಸೌಧ, ಮನೆ ಹಾಗೂ ಗೋಡೌನ್ಗೆ ಏಕೆ ಹೋದರು? ಈ ರೀತಿಯಾಗಿ ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ತಮ್ಮ ಚಾರಿತ್ರ್ಯವಧೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತಾವು ನಿತ್ಯ ಓಡಾಡುವ ಸ್ಥಳಗಳಲ್ಲಿಯೂ ತಮ್ಮ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿಸುತ್ತಿದ್ದು, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಕರಣ ದಾಖಲು
ಸಂತ್ರಸ್ತೆಯ ದೂರನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಿದ ಯಶವಂತಪುರ ಠಾಣೆ ಪೊಲೀಸರು, ಬುಧವಾರ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 72 (ನಿರ್ದಿಷ್ಟ ಲೈಂಗಿಕ ಅಪರಾಧಗಳ ಸಂತ್ರಸ್ತರ ಗುರುತು ಬಹಿರಂಗಪಡಿಸುವುದು) ಹಾಗೂ ಕಲಂ 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈಗಾಗಲೇ ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆ ನಡೆಯುತ್ತಿರುವ ನಡುವೆಯೇ, ಈ ಹೊಸ ಎಫ್ಐಆರ್ ದಾಖಲಾಗಿರುವುದು ಶಾಸಕ ಮುನಿರತ್ನ ಅವರಿಗೆ ಮತ್ತಷ್ಟು ಕಾನೂನು ತೊಡಕುಗಳನ್ನು ತಂದೊಡ್ಡಿದೆ. ಪ್ರಕರಣದ ಕುರಿತು ಯಶವಂತಪುರ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
#UdayakalaNews #Munirathna #BJPMLA #BengaluruNews #YeshwanthpurPolice #FIRAgainstMunirathna #KarnatakaPolitics #BNS #VictimIdentity #LegalNews #RajarajeshwariNagar #KannadaNews #BengaluruCrimeNews #KarnatakaNews

