ಕಾಂಗ್ರೆಸ್‌ನ ಸ್ಪಷ್ಟ ಅನುಮೋದನೆ ಇಲ್ಲದೆ ಯಾವುದೇ ದೇಶದ ವಿರುದ್ಧ ಯುದ್ಧ ಅಥವಾ ದೀರ್ಘಕಾಲದ ಸೇನಾ ಕಾರ್ಯಾಚರಣೆ ನಡೆಸಬಾರದು ಎಂದು ಒತ್ತಾಯಿಸುವ ನಿರ್ಣಯವನ್ನು ಅಮೆರಿಕ ಸೆನೆಟ್ ಅಂಗೀಕರಿಸಿದೆ. ಈ ಮೂಲಕ ಅಧ್ಯಕ್ಷ ಟ್ರಂಪ್ ಅವರ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ಮತ್ತು ಯುದ್ಧ ನೀತಿಗೆ ತಡೆ ಒಡ್ಡಲಾಗಿದೆ. ಇದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯೂ ಹೌದು.
ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ನಿರ್ಣಯವು 50-48 ಮತಗಳ ಅಂತರದಲ್ಲಿ ಅಂಗೀಕಾರಗೊಂಡಿತು. ಈ ನಿರ್ಣಯದ ಪ್ರಕಾರ, ಕಾಂಗ್ರೆಸ್ ಅಧಿಕೃತ ಅನುಮತಿ ನೀಡದ ಹೊರತು ಇರಾನ್ ವಿರುದ್ಧ ಕೈಗೊಂಡಿರುವ ಕ್ರಮಗಳಿಂದ ಅಮೆರಿಕ ಸೇನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಕದನವಿರಾಮ ಮಾತುಗಳತೆಗಳ ನಡುವೆ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸೇನಾ ದಾಳಿಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಜಾಗತಿಕ ತೈಲ ಮಾರುಕಟ್ಟೆ, ಹಡಗು ಸಂಚಾರ ಮತ್ತು ಇಂಧನ ಬೆಲೆಗಳ ಮೇಲೂ ಪರಿಣಾಮ ಬೀರಿದೆ. ಹರ್ಮುಜ್ ಜಲಸಂಧಿಯ ಭದ್ರತೆ ಕುರಿತು ವಿಶ್ವದ ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿದ್ದವು.
ಸೆನೆಟ್‌ನಲ್ಲಿ ನಿರ್ಣಯ ಮಂಡನೆಗೆ ಮುಂದಾದ ಡೆಮಾಕ್ರಟಿಕ್ ನಾಯಕ ಚಕ್ ಶೂಮರ್, ಯುದ್ಧದಂತಹ ಮಹತ್ವದ ನಿರ್ಧಾರಗಳನ್ನು ಅಧ್ಯಕ್ಷರು ಏಕಪಕ್ಷೀಯವಾಗಿ ತೆಗೆದುಕೊಳ್ಳಬಾರದು. ಸಂವಿಧಾನದ ಪ್ರಕಾರ ಕಾಂಗ್ರೆಸ್‌ಗೆ ಇರುವ ಅಧಿಕಾರವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ನಾಯಕರು, ಕಾಂಗ್ರೆಸ್ ಅನುಮತಿ ಪಡೆಯದೆ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸುವ ಮೂಲಕ ಟ್ರಂಪ್ ಸಂವಿಧಾನದ ಮಿತಿಗಳನ್ನು ಮೀರಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯುದ್ಧ ಈಗಾಗಲೇ ಅಂತ್ಯಗೊಂಡಿದ್ದು, ಇರಾನ್ ಜೊತೆ ಶಾಂತಿ ಮತ್ತು ಅಣು ಒಪ್ಪಂದ ಕುರಿತ ಮಾತುಕತೆಗಳು ಮುಂದುವರಿದಿವೆ, ಅಧ್ಯಕ್ಷರ ಅಧಿಕಾರವನ್ನು ಮಿತಿಗೊಳಿಸುವ ಪ್ರಯತ್ನಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತವೆ ಎಂದು ಆಡಳಿತ ವಾದಿಸಿದೆ.


