ಎಲ್ಐಸಿ ಪಾಲಿಸಿಯಿಂದ 30 ಲಕ್ಷ ರೂ. ಪಡೆದುಕೊಳ್ಳುವ ಆಸೆಗೆ ಬಿದ್ದ ಅಣ್ಣನೊಬ್ಬ ತಮ್ಮನ ಕೊಲೆ ಮಾಡಿರುವ ಘಟನೆ ತುಮಕೂರಿನ ಪಟ್ಟನಾಯಕನಹಳ್ಳಿಯಲ್ಲಿ ಬಹಿರಂಗಗೊಂಡಿದೆ. 35 ವರ್ಷದ ರಮೇಶ್ ಸಾವು ಮೊದಲಿಗೆ ಬೈಕ್ ಅಪಘಾತದ ಪ್ರಕರಣ ಎಂದು ಹೇಳಲಾಗಿತ್ತು, ಎಲ್ಐಸಿ ಪಾಲಿಸಿ ಹಣ ಲಪಟಾಯಿಸಲು ಅಣ್ಣ ಹನುಮಂತರಾಜು ಹೀಗೆಂದು ಕಥೆ ಕಟ್ಟಿದ್ದ.
ಆಂಧ್ರಪ್ರದೇಶದ ರಮೇಶ್ ಆರು ವರ್ಷದಿಂದ ವರ್ಷದಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಮತ್ತು ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದ. ಹೆಂಡತಿಯಿಂದ ದೂರವಾಗಿ ಮಾಟಮಂತ್ರ ಮಾಡುವ ವೃತ್ತಿಯಲ್ಲಿ ತೊಡಗಿದ್ದ. ಸ್ವಂತ ಅಣ್ಣಂದಿರ ಸಂಸಾರಕ್ಕೆ ಮಾಟಮಂತ್ರ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.
ರಮೇಶ್ ಹೆಸರಿಗೆ ಅಣ್ಣ ಹನುಮಂತರಾಜು 15 ಲಕ್ಷ ರೂಪಾಯಿ ಎಲ್ಐಸಿ ಪಾಲಿಸಿ ಮಾಡಿಸುತ್ತಾನೆ. ನಾಮಿನಿ ತನ್ನ ಹೆಸರಿಗೆ ಮಾಡಿಸಿಕೊಳ್ಳುತ್ತಾನೆ. ಅಣ್ಣ ಹನುಮಂತರಾಜು ಪ್ರತಿ ವರ್ಷ ಪಾಲಿಸಿಗೆ 85,000 ರೂ. ವಿಮಾ ಕಂತು ಕಟ್ಟುತ್ತಾನೆ. ವಿಮೆಯು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ನಾಮಿನಿದಾರರಿಗೆ ವಿಮೆ ಮೊತ್ತದ ಡಬಲ್ ಹಣ ಅಂದರೆ 30 ಲಕ್ಷ ಹಣ ಸಿಗುವಂತಿತ್ತು. ಈ ಹಣದ ಆಸೆಗೆ ಆರೋಪಿ ಹನುಮಂತರಾಜು ತಮ್ಮನ ಕೊಲೆ ಮಾಡಿದ್ದಾನೆ.
ಬೆಂಗಳೂರಿನ ನವಯುಗ ಟೋಲ್ ಬಳಿ ತನ್ನ ಅಂಗಡಿಗೆ ಬರುತಿದ್ದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ.ಜಿಲಾನ್ ಜೊತೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿದ್ದು ತನಿಖೆ ವೇಳೆ ಬಯಲಾಗಿದೆ. ಜೂನ್ 19ರಂದು ನಿಧಿ ಪೂಜೆ ಇದೆ ಎಂದು ರಮೇಶ್ನನ್ನು ಶಿರಾ ಅಮರಾಪುರ ರಸ್ತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ದೊಣ್ಣೆಯಿಂದ ಮೇಲೆ ಹಲ್ಲೆ ನಡೆಸಿ ಮೈಮೇಲೆ ಕಾರು ಹರಿಸಿದ್ದಾರೆ. ಜೀವ ಹೋಗದಿದ್ದಾಗ ಬ್ಯಾಟರಿ ಜಂಪಿಂಗ್ ವಯರ್ ಮೂಲಕ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವ ಹಾಗೂ ಬೈಕನ್ನು ರಸ್ತೆಯಲ್ಲಿ ಹಾಕಿದ್ದಾರೆ. ಬೈಕ್ನ ಮುಂಭಾಗವನ್ನು ಜಖಂ ಮಾಡಿ ಅಪಘಾತದ ನಾಟಕ ಮಾಡಿದ್ದಾರೆ.
ಮೃತನ ಹಿರಿಯ ಅಣ್ಣ ರಂಗನಾಥ ದೂರಿನ ಅನ್ವಯ ಪೊಲೀಸರು ಅನುಮಾನಸ್ಪದ ಸಾವು ಎಂದು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಹನುಮಂತರಾಜು ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.


