Wednesday, October 07, 2026
Menu

ವಿಕಸಿತ ಭಾರತವೇ ನಮ್ಮ ಮುಂದಿನ ಗುರಿ: ಪ್ರಧಾನಿ ನರೇಂದ್ರ ಮೋದಿ

ಉದಯಕಾಲ ನ್ಯೂಸ್‌, ನವದೆಹಲಿ: ಹಿಂದೆ ದೇಶದಲ್ಲಿ ಸಂಕಷ್ಟ ಎದುರಾದಾಗ ನಲುಗುತ್ತಿತ್ತು, ಆದರೆ ಇಂದು ಜಾಗತಿಕವಾಗಿ ಯಾವುದೇ ಬಿಕ್ಕಟ್ಟು ಉಂಟಾದರೂ ಭಾರತದ ಆಂತರಿಕ ಶಕ್ತಿ ಮತ್ತು ಆಡಳಿತ ನೀತಿಗಳ ಬಗ್ಗೆ ವಿಶ್ವವೇ ಚರ್ಚಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸರ್ಕಾರದ ಸಾಧನೆಯನ್ನು ಬಣ್ಣಿಸಿದ್ದಾರೆ.ಸಾಂವಿಧಾನಿಕ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಸುದೀರ್ಘ ಸೇವಾವಧಿಯನ್ನು ಪೂರೈಸಿದ ಐತಿಹಾಸಿಕ ಸಂದರ್ಭದಲ್ಲಿ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸೇವಾ ಜ್ಯೋತಿ’ ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರು ಮತ್ತು ದೇಶದ ಜನತೆಯನ್ನುದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದರು.

ಜನಾಶೀರ್ವಾದವೇ ನನ್ನ ಬೆಳವಣಿಗೆಗೆ ಕಾರಣ
“ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ದೇಶದ ಜನತೆಯೇ ಕಾರಣ. ಕೋಟ್ಯಂತರ ನಾಗರಿಕರ ಅಚಲ ವಿಶ್ವಾಸ ಮತ್ತು ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಪರಿಶ್ರಮವೇ ನನ್ನ ಅತಿ ದೊಡ್ಡ ಶಕ್ತಿ. ದೇಶ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ದೇಶಕ್ಕೆ ಸಂಪೂರ್ಣ ಉತ್ತರದಾಯಿಯಾಗಿದ್ದೇನೆ” ಎಂದು ಮೋದಿ ತಿಳಿಸಿದರು.
ಇಂದು ಮುಂಜಾನೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದಾಗ “ನನ್ನಲ್ಲಿ ಕಲಿಯುವ ಆಸಕ್ತಿ ಯಾವತ್ತೂ ಕಡಿಮೆ ಆಗಬಾರದು” ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದ ಅವರು, ತಮ್ಮ ಜೀವನದಲ್ಲಿ ಯಾವ ಘಟನೆಯೂ ವ್ಯರ್ಥವಾಗಿಲ್ಲ ಎಂದರು. ನನ್ನನ್ನು ಕೆಡವಲು ಯತ್ನಿಸಿದವರಿಂದ ಪುಟಿದೆದ್ದು ನಿಲ್ಲುವುದನ್ನು, ಟೀಕಾಕಾರರಿಂದ ಆತ್ಮವಿಮರ್ಶೆಯನ್ನು, ವಿರೋಧಿಗಳಿಂದ ಪ್ರಜಾಪ್ರಭುತ್ವದ ಅಸಲಿ ಶಕ್ತಿಯನ್ನು ಹಾಗೂ ಕೊರೊನಾ ಮಹಾಮಾರಿಯಿಂದ ಸದಾ ಸನ್ನದ್ಧವಾಗಿರುವುದನ್ನು ಕಲಿತಿದ್ದೇನೆ ಎಂದು ವಿವರಿಸಿದರು.
25 ವರ್ಷಗಳ ಹೆಜ್ಜೆಗುರುತು
2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣವನ್ನು ಸ್ಮರಿಸಿದ ಅವರು, ಅಂದು ಆಡಳಿತಾತ್ಮಕ ಅನುಭವವಿರಲಿಲ್ಲವಾದರೂ ಜನರ ಮೇಲಿನ ನಂಬಿಕೆಯೇ ಬಲವಾಗಿತ್ತು ಎಂದರು. 2014ರಲ್ಲಿ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಂಡಾಗ ಆರ್ಥಿಕತೆ ಹದಗೆಟ್ಟಿತ್ತು ಮತ್ತು ಹಣದುಬ್ಬರ ಗಗನಕ್ಕೇರಿತ್ತು. ಆದರೆ ಇಂದು ಪ್ರಧಾನ ಸೇವಕನಾಗಿ 12 ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕ ಮತ್ತು ಜಾಗತಿಕ ಚಿತ್ರಣವೇ ಬದಲಾಗಿದೆ ಎಂದು ಕೊಂಡಾಡಿದರು.
ತುಷ್ಟೀಕರಣ ರಾಜಕಾರಣಕ್ಕೆ ತಿಲಾಂಜಲಿ
ಹಿಂದೆ ಮತಕ್ಕಾಗಿ ಜನರನ್ನು ಜಾತಿ, ಧರ್ಮಗಳ ಆಧಾರದಲ್ಲಿ ಒಡೆಯುತ್ತಿದ್ದರು. ಆದರೆ ಸಮಸ್ಯೆ ಎಲ್ಲರಿಗೂ ಒಂದೇ ಎಂದಮೇಲೆ ಪರಿಹಾರವೂ ಎಲ್ಲರಿಗೂ ಸಮಾನವಾಗಿರಬೇಕು. ಅದಕ್ಕಾಗಿಯೇ ನಾವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದಡಿ ಯಾವುದೇ ಯೋಜನೆ ರೂಪಿಸಿದರೂ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಪೂರ್ಣ ಪ್ರಮಾಣದ ತಲುಪುವಿಕೆ ಸೂತ್ರ ಜಾರಿಗೆ ತಂದೆವು ಎಂದರು.

ಈ 25 ವರ್ಷಗಳ ಮೈಲಿಗಲ್ಲು ಕೇವಲ ಹಬ್ಬದ ಆಚರಣೆಯಲ್ಲ, ಮುಂದಿನ ಗುರಿಗಳನ್ನು ತಲುಪಲು ಪ್ರೇರಣೆ ಎಂದು ತಿಳಿಸಿದ ಪ್ರಧಾನಿ ಮೋದಿ
1. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ.
2. ಭಾರತವನ್ನು ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದು.
3. ಭಾರತವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಬದಲಾಯಿಸುವುದು.
4. ದೇಶದಲ್ಲಿ ಒಲಿಂಪಿಕ್ಸ್ ಆಯೋಜಿಸುವುದು.
5. ಭಾರತೀಯರು ಬಾಹ್ಯಾಕಾಶಕ್ಕೆ ಗಗನಯಾತ್ರೆ ಕೈಗೊಳ್ಳುವುದು.

ಈ 5 ಪ್ರಮುಖ ಸಂಕಲ್ಪಗಳನ್ನು ಘೋಷಿಸಿದರು.
#NarendraModi #Udayakala #ViksitBharat #Modi25Years #IndianEconomy #SevaJyoti #NewDelhi #PMModiNews

Related Posts

Leave a Reply

Your email address will not be published. Required fields are marked *