ಉದಯಕಾಲ ನ್ಯೂಸ್, ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಕೈಗೊಂಡಿರುವ ತನಿಖೆಯನ್ನು ಪ್ರಶ್ನಿಸಿ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರನ್ನೊಳಗೊಂಡ ಏಕಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರಾದ ಗಿರೀಶ್ ಮಟ್ಟಣ್ಣವರ್ ಹಾಗೂ ಸರ್ಕಾರದ ಪರ ವಕೀಲರ ನಡುವೆ ತೀವ್ರ ವಾದ-ಪ್ರತಿವಾದ ನಡೆದವು. ಕಾನೂನುಬದ್ಧ ಪ್ರಕ್ರಿಯೆಗಳು ಹಾಗೂ ತನಿಖೆಯ ಹಂತದ ಕುರಿತು ನ್ಯಾಯಪೀಠವು ಹಲವು ಮಹತ್ವದ ಅವಲೋಕನಗಳನ್ನು ದಾಖಲಿಸಿದೆ.
ಅರ್ಜಿದಾರರ ಪರ ವಕೀಲರ ವಾದವೇನು?
ವಿಚಾರಣೆ ವೇಳೆ ಗಿರೀಶ್ ಮಟ್ಟಣ್ಣವರ್ ಪರ ವಾದ ಮಂಡಿಸಿದ ವಕೀಲರು, ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ದೂರು ನೀಡಬೇಕಿತ್ತು; ಆದರೆ ಮುಸುಕುಧಾರಿ ಚಿನ್ನಯ್ಯ ದೂರು ನೀಡಿದ್ದು, ಅವರು ಸರ್ಕಾರಿ ನೌಕರನಲ್ಲ ಎಂದು ಆಕ್ಷೇಪಿಸಿದರು. ಅಸಂಜ್ಞೆಯ (ನಾನ್-ಕಾಗ್ನಿಜೆಬಲ್) ಅಪರಾಧಕ್ಕೆ ಸಂಬಂಧಿಸಿದಂತೆ ಪೊಲೀಸರು ನೇರವಾಗಿ ಎಫ್ಐಆರ್ ದಾಖಲಿಸಿರುವುದು ಕಾನೂನುಬಾಹಿರವಾಗಿದೆ ಎಂದು ವಾದಿಸಿದರು.
ಇದರ ಜೊತೆಗೆ, ವಿಚಾರಣೆಯ ನೆಪದಲ್ಲಿ ಕಕ್ಷಿದಾರರಿಗೆ ಬೆಳಗಿನಿಂದ ರಾತ್ರಿಯವರೆಗೆ ಕಿರುಕುಳ ನೀಡಲಾಗುತ್ತಿದೆ ಎಂದೂ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡರು ಹಾಗೂ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿದರು.
ಸರ್ಕಾರದ ಪರ ವಕೀಲರ ಪ್ರತಿವಾದ
ಅರ್ಜಿದಾರರ ವಾದಕ್ಕೆ ಬಲವಾದ ಪ್ರತಿವಾದ ಮಂಡಿಸಿದ ಸರ್ಕಾರದ ಪರ ವಕೀಲರು, ಮ್ಯಾಜಿಸ್ಪ್ರೇಟ್ ಅವರಿಂದ ಪೂರ್ವಾನುಮತಿ ಪಡೆದೇ ಕಾನೂನುಬದ್ಧವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಕಾನೂನಿನ ತಾಂತ್ರಿಕ ನಿರ್ಬಂಧಗಳು ಅನ್ವಯವಾಗುವುದು ಆರೋಪಪಟ್ಟಿ (ಚಾರ್ಜ್ಶೀಟ್) ಸಲ್ಲಿಕೆಯಾದ ನಂತರವೇ ಹೊರತು, ತನಿಖೆಯ ಹಂತದಲ್ಲಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಪೀಠದ ಗಮನಕ್ಕೆ ತಂದರು.
ಮತ್ತೊಂದು ಮಹತ್ವದ ಅಂಶವನ್ನು ಪ್ರಸ್ತಾಪಿಸಿದ ಸರ್ಕಾರದ ವಕೀಲರು, ಈ ಹಿಂದೆ ಬೇರೊಂದು ಅರ್ಜಿಯಲ್ಲಿ ಇದೇ ಅರ್ಜಿದಾರರು ಪ್ರಕರಣದ ತನಿಖೆ ಸರಿಯಾಗಿ ನಡೆಯಲಿ ಎಂದು ಕೋರಿದ್ದರು. ಆದರೆ, ಈಗ ತನಿಖೆ ತಮ್ಮ ಕೊರಳಿಗೆ ಸುತ್ತಿಕೊಳ್ಳುತ್ತಿದ್ದಂತೆ ಪ್ರಕರಣವನ್ನು ರದ್ದು ಮಾಡಿ ಎನ್ನುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಹೈಕೋರ್ಟ್ ಪೀಠದ ಮಹತ್ವದ ಅವಲೋಕನ
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಪೀಠವು, ಮೂಲ ಎಫ್ಐಆರ್ ಅಜ್ಞಾತ ವ್ಯಕ್ತಿಗಳ ವಿರುದ್ಧ ದಾಖಲಾಗಿದೆ. ತನಿಖೆಯ ಸಂದರ್ಭದಲ್ಲಿ ಸಾಕ್ಷ್ಯಗಳು ಲಭ್ಯವಾದ ಕಾರಣ, ಮ್ಯಾಜಿಸ್ಪ್ರೇಟ್ ಅವರ ಅನುಮತಿ ಪಡೆದು ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ತಿಳಿಸಿತು. ಒಂದೆಡೆ ತನಿಖೆ ನಡೆಯಲಿ ಎನ್ನುತ್ತೀರಿ, ಇನ್ನೊಂದೆಡೆ ತನಿಖೆ ರದ್ದು ಮಾಡಿ ಎನ್ನುತ್ತೀರಿ. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗಲೇ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರುವುದು ಸರಿಯಾದ ಕ್ರಮವಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ಇದೇ ವೇಳೆ ನ್ಯಾಯಾಂಗದ ಕರ್ತವ್ಯದ ಕುರಿತು ಮಾರ್ಮಿಕವಾಗಿ ನುಡಿದ ಪೀಠವು, ನ್ಯಾಯಾಧೀಶರ ಕೆಲಸ ತಾವರೆ ಎಲೆಯ ಮೇಲಿನ ನೀರಿನಂತಿರಬೇಕು; ನೀರಿನಲ್ಲೇ ಬೆಳೆಯಬೇಕು, ಆದರೆ ನೀರನ್ನು ಅಂಟಿಸಿಕೊಳ್ಳಬಾರದು ಎಂದು ಹೇಳಿತು. ಕಾನೂನುಬದ್ಧ ದಾಖಲೆಗಳ ಆಧಾರದ ಮೇಲೆ ಮಾತ್ರ ತೀರ್ಪು ನೀಡಬೇಕೇ ಹೊರತು, ನೈತಿಕ ವಿಚಾರಗಳು ತೀರ್ಪಿನೊಳಗೆ ಇಣುಕಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪ್ರಕರಣದ ಹಿನ್ನೆಲೆ!
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಸಮಗ್ರ ತನಿಖೆ ನಡೆಸಿದ ಅಧಿಕಾರಿಗಳು, ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿನ ಹಲವು ವೈರುಧ್ಯಗಳನ್ನು ಬಯಲಿಗೆಳೆದಿದ್ದರು.
ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುವ ಉದ್ದೇಶದಿಂದ ವ್ಯವಸ್ಥಿತ ಷಡ್ಯಂತ್ರ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನಯ್ಯ ಅಲಿಯಾಸ್ ಚಿನ್ನ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ವಿಠಲ ಗೌಡ ಹಾಗೂ ಸುಜಾತಾ ಭಟ್ ಸೇರಿದಂತೆ ಆರು ಮಂದಿಯ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ ಹಾಗೂ ನಕಲಿ ದಾಖಲೆ ತಯಾರಿಕೆ ಆರೋಪದಡಿ ಎಸ್ಐಟಿ ತನಿಖೆ ಮುಂದುವರಿದಿದೆ. ತನಿಖಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ಹೈಕೋರ್ಟ್ ವಜಾಗೊಳಿಸಿದೆ.
#DharmasthalaCase #KarnatakaHighCourt #GirishMattannavar #SITInvestigation #BengaluruNews #JusticeVShrishanananda #KarnatakaNews #LegalNews #Dharmasthala #UdayakalaNews


