ಉದಯಕಾಲ ನ್ಯೂಸ್, ಮಂಗಳೂರು: ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ಮುಂದಾದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕಾಯ್ದೆಗಳನ್ನು ಹಿಂಪಡೆಯುವ ಪ್ರಯತ್ನ ನಡೆದರೆ ಸದನದೊಳಗೆ ಮತ್ತು ಹೊರಗೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ, ಬಜೆಟ್ ಹಂಚಿಕೆಯಲ್ಲಿನ ತಾರತಮ್ಯ, ಗ್ಯಾರಂಟಿ ಯೋಜನೆಗಳ ವೈಫಲ್ಯ, ನಿರಂತರ ಬೆಲೆ ಏರಿಕೆ, ಸಾರಿಗೆ ನಿಗಮಗಳ ದುಃಸ್ಥಿತಿ ಹಾಗೂ ಸಿ.ಡಿ. ಪ್ರಕರಣದ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯ ಕುರಿತು ಸರಣಿ ವಾಗ್ದಾಳಿ ನಡೆಸಿದರು.
ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ತೀವ್ರ ವಿರೋಧ
ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರದ್ದತಿಗೆ ಅವಕಾಶ ನೀಡುವುದಿಲ್ಲ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುತ್ತೇವೆ ಎಂದು ಹೇಳಿಕೆ ನೀಡಿರುವುದನ್ನು ಪ್ರಸ್ತಾಪಿಸಿದ ಅವರು, ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯಲು ಹೊರಟಿದೆ ಎಂದು ಆರೋಪಿಸಿದರು.
ಮಹಾತ್ಮ ಗಾಂಧೀಜಿಯವರ ಆಶಯದಂತೆ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಮುಟ್ಟಲು ಬಿಡುವುದಿಲ್ಲ. ಅಧಿವೇಶನದಲ್ಲಿ ಈ ವಿಚಾರವನ್ನು ಸರ್ಕಾರ ತಂದರೆ ಅದೇ ನಮ್ಮ ‘ನಂಬರ್ ಒನ್’ ಹೋರಾಟವಾಗಲಿದೆ ಎಂದು ಅವರು ಗುಡುಗಿದರು.
ಬಜೆಟ್ ತಾರತಮ್ಯ, ನಿಗಮಗಳಿಗೆ ಅನುದಾನ ಕಡಿತದ ಆರೋಪ
ಸರ್ಕಾರದ ಬಜೆಟ್ ಅಂಕಿಅಂಶಗಳನ್ನು ಮುಂದಿಟ್ಟು ಮಾತನಾಡಿದ ಆರ್. ಅಶೋಕ್, ರಾಜ್ಯದಲ್ಲಿ ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಿತಿಮೀರಿದೆ ಎಂದು ಟೀಕಿಸಿದರು. 2023-24ರಲ್ಲಿ ₹3,409 ಕೋಟಿ ಇದ್ದ ಅಲ್ಪಸಂಖ್ಯಾತರ ಬಜೆಟ್ ಅನ್ನು 2025-26ರಲ್ಲಿ ₹4,535 ಕೋಟಿಗೆ ಹಾಗೂ 2026-27ರಲ್ಲಿ ₹4,762 ಕೋಟಿಗೆ (ಶೇ. 33ರಷ್ಟು) ಹೆಚ್ಚಿಸಲಾಗಿದೆ. ಉರ್ದು ಶಾಲೆಗಳ ಅಭಿವೃದ್ಧಿಗೆ ₹100 ಕೋಟಿ, ಇಮಾಮ್‌ಗಳಿಗೆ ₹6,000 ಗೌರವಧನ, ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ₹1,000 ಕೋಟಿ, ವಿದೇಶಿ ವ್ಯಾಸಂಗಕ್ಕೆ ₹30 ಲಕ್ಷ ನೆರವು ನೀಡಲಾಗುತ್ತಿದೆ. ಜೊತೆಗೆ 5,000 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ನೇರವಾಗಿ ₹50,000 ನಗದು (ಡಿಬಿಟಿ) ವರ್ಗಾಯಿಸುವ ಪ್ರಸ್ತಾವನೆ ತರಲಾಗಿದೆ ಎಂದು ಆಕ್ಷೇಪಿಸಿದರು.
ಮತ್ತೊಂದೆಡೆ ಬೋವಿ ನಿಗಮಕ್ಕೆ ₹100 ಕೋಟಿ ಇದ್ದ ಅನುದಾನವನ್ನು ₹50 ಕೋಟಿಗೆ, ಅಂಬೇಡ್ಕರ್ ನಿಗಮಕ್ಕೆ ₹200 ಕೋಟಿ ಇದ್ದದ್ದನ್ನು ₹100 ಕೋಟಿಗೆ ಇಳಿಸಲಾಗಿದೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ಹಿಂದುಳಿದ ವರ್ಗಗಳ ನಿಗಮಗಳಿಗೆ ಶೇ. 50ರಿಂದ 80ರಷ್ಟು ಅನುದಾನ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು. ಮಂಗಳೂರಿಗೆ ಬಂದು ಬಿಲ್ಲವ, ಬಂಟ್ ಸಮುದಾಯದ ನಿಗಮಗಳಿಗೆ ಅನುದಾನ ನೀಡುವುದಾಗಿ ಹೇಳಿ ನಯಾಪೈಸೆ ನೀಡಿಲ್ಲ. ಹಿಂದೆ 12,000 ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡುವಂತಹ ಪರಿಸ್ಥಿತಿ ಇರಲಿಲ್ಲ, ಈಗ ಆ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ, ವಸತಿ ಯೋಜನೆಯಲ್ಲಿ ಮೀಸಲಾತಿಯನ್ನು ಶೇ. 10ರಿಂದ ಶೇ. 15ಕ್ಕೆ ಏರಿಸಿರುವುದು ಸರಿಯಲ್ಲ; ಇತರ ಸಮುದಾಯಗಳಿಗೆ ಏಕೆ ಏರಿಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಸೇನೆಯಲ್ಲಿ ಧರ್ಮ ಆಧಾರಿತ ನೇಮಕಾತಿ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ 60 ದಿನಗಳ ವಿಶೇಷ ಆರ್ಮಿ ತರಬೇತಿ ನೀಡಲು ಮುಂದಾಗಿರುವುದನ್ನೂ ಅವರು ಖಂಡಿಸಿದರು.
ಪ್ರಯಾಣ ಉಚಿತ, ದರ ಏರಿಕೆ ಖಚಿತ – ಬೆಲೆ ಏರಿಕೆ ವಿರುದ್ಧ ಕಿಡಿ
ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ “ಪ್ರಯಾಣ ಉಚಿತ, ದರ ಏರಿಕೆ ಖಚಿತ” ಎಂಬಂತಾಗಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದರು. ಗ್ಯಾರಂಟಿ ಹೆಸರಿನಲ್ಲಿ ಒಂದು ಮನೆಗೆ ₹2,000 ನೀಡಿ, ಹಾಲಿನ ದರ (₹8 ಏರಿಕೆ), ತುಪ್ಪ (₹100 ಏರಿಕೆ), ಮೊಸರು (₹10–15 ಏರಿಕೆ), ಬಸ್ ಪ್ರಯಾಣ ದರ, ವಿದ್ಯುತ್ ದರ, ಮನೆ ತೆರಿಗೆ, ಮದ್ಯದ ದರ ಹಾಗೂ ಸ್ಟ್ಯಾಂಪ್ ಡ್ಯೂಟಿ (ಶೇ. 26ರಷ್ಟು) ಹೆಚ್ಚಿಸಿ ಜನರಿಂದ ಹತ್ತು ಪಟ್ಟು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗೃಹಲಕ್ಷ್ಮಿ ಯೋಜನೆಯ ₹5,000 ಕೋಟಿ (ಜನವರಿ, ಫೆಬ್ರವರಿ ತಿಂಗಳ ಹಣ) ಬಾಕಿ ಉಳಿಸಿಕೊಳ್ಳಲಾಗಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಹಾಗೂ ಆಸಿಡ್ ದಾಳಿ ಸಂತ್ರಸ್ತರಿಗೆ 5 ತಿಂಗಳಿಂದ ಹಣ ನೀಡಿಲ್ಲ. ಯುವನಿಧಿ ಯೋಜನೆ ಸ್ಥಗಿತಗೊಂಡಿದ್ದು, ಭರವಸೆ ನೀಡಿದಂತೆ ₹15,000 ಗೌರವಧನ ನೀಡದೆ ಆಶಾ ಕಾರ್ಯಕರ್ತೆಯರು ಬೀದಿಗಿಳಿಯುವಂತಾಗಿದೆ ಎಂದರು. ಹಾವೇರಿ ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳ ಬಿಸಿಯೂಟಕ್ಕೆ ಅಕ್ಕಿ ನೀಡದ ಸ್ಥಿತಿ ಇರುವಾಗ, ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಹಾಗೂ ಸರ್ಕಾರದ ಭೋಜನ ಕೂಟದ ಬಗ್ಗೆಯೂ ಅವರು ತೀವ್ರ ಟೀಕೆ ಮಾಡಿದರು.
ಸಾಲದ ಹೊರೆ, ಸಾರಿಗೆ ನಿಗಮಗಳ ದುಃಸ್ಥಿತಿ
ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ₹1.5 ಲಕ್ಷ ಕೋಟಿ ಸಾಲ ಮಾಡಲು ಹೊರಟಿದ್ದು, ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದರು. ಮಂಗಳೂರು ಮಹಾನಗರ ಪಾಲಿಕೆಗೆ ₹3,000 ಕೋಟಿ ನೇರವಾಗಿ ಬಿಡುಗಡೆ ಮಾಡುವಂತೆ ಸವಾಲು ಹಾಕಿದ ಅವರು, ಸಾರಿಗೆ ನಿಗಮಗಳಲ್ಲಿ ಬಸ್‌ಗಳ ನಿರ್ವಹಣೆಗೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಸರ್ಕಾರ ಬಾಕಿ ಉಳಿಸಿಕೊಂಡಿರುವ ₹5,000 ಕೋಟಿಯನ್ನು ನಿಗಮಗಳಿಗೆ ನೀಡಿದ್ದರೆ ಬಸ್ ದರ ಏರಿಕೆ ಮಾಡುವ ಪ್ರಮೇಯ ಬರುತ್ತಿರಲಿಲ್ಲ ಎಂದರು.
ಸರ್ಕಾರದ ಜನವಿರೋಧಿ ನೀತಿ ಮತ್ತು ಬೆಲೆ ಏರಿಕೆ ಖಂಡಿಸಿ ಇಡೀ ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಹಾಗೂ ಮಂಗಳೂರು ಭಾಗದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಸಿ.ಡಿ. ಪ್ರಕರಣದ ತನಿಖೆ ಹಾಗೂ ವಿವಿಧ ಹಗರಣಗಳನ್ನೂ ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಚಿವ ಸಂಪುಟದ ಔತಣಕೂಟವನ್ನು ಬಹಿಷ್ಕರಿಸುವುದಾಗಿಯೂ ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.
#RAshok #BJP #KarnatakaPolitics #AntiConversionBill #CowSlaughterBan #MangaluruNews #KarnatakaAssembly #PriceHike #KarnatakaBudget #UdayakalaNews

