Tuesday, September 22, 2026
Menu

ಚನ್ನರಾಯಪಟ್ಟಣದಲ್ಲಿ ನವ ವಿವಾಹಿತೆ ಕಣ್ಮರೆ: ಪತಿ ವಿರುದ್ಧ ಕೊಲೆ ಆರೋಪ

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿಯ ನಾಲೆಯಲ್ಲಿ ನವವಿವಾಹಿತ ಮಹಿಳೆ ಕಣ್ಮರೆಯಾಗಿರುವ ಘಟನೆ ನಡೆದಿದೆ. ಜಯಶೀಲಾ.ಬಿ.ಕೆ ಅನುಮಾನಾಸ್ಪದವಾಗಿ ಕಣ್ಮರೆಯಾಗಿರುವ ಮಹಿಳೆ.

ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ (27) ಎಂಬಾತನ ಜೊತೆ ಆಕೆಯ ಮದುವೆ ನಡೆದಿದೆ. ರಾಜಶೇಖರ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಎನ್ನಲಾಗಿದೆ. ಮದುವೆಯಾದ ಬಳಿಕ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ, ಎರಡು ಬಾರಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ವರದಕ್ಷಿಣೆಗಾಗಿ ಪತಿಯೇ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರ ಆರೋಪಿಸಿದ್ದಾರೆ.

ಎರಡುವರೆ ತಿಂಗಳ ಗರ್ಭಿಣಿ ಜಯಶೀಲಾಳನ್ನು ಪತಿ ರಾಜಶೇಖರ ಸೆ.19 ರಂದು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ತಂದೆ ದೊರೆಸ್ವಾಮಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಜಯಶೀಲಾ ಹೇಳಿದ್ದಳು. ತಂದೆಗೆ ಫೋನ್ ಮಾಡಿದ್ದಕ್ಕೆ ಜಯಶೀಲಾ ಜೊತೆ ಪತಿ ಹಾಗೂ ಅತ್ತೆ ವಿಜಯಲಕ್ಷ್ಮಿ ಜಗಳ ಮಾಡಿದ್ದರು. ಬಳಿಕ ಆಕೆ ತಂದೆಗೆ ಕರೆ ಮಾಡಿ ಆಸ್ಪತ್ರೆಗೆ ಬರಬೇಡಿ ಎಂದಿದ್ದಳು.

ಪತಿ ರಾಜಶೇಖರ ಕುಟುಂಬಸ್ಥರು ಹಾಗೂ ಸಂಬಂಧಿಕರು ಕಣ್ಮರೆಯಾಗಿರುವ ಜಯಶೀಲಾ ಹಾಗೂ ಆಕೆಯ ಪೋಷಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆಕೆ ಕಣ್ಮರೆಯಾಗಿಲ್ಲ, ಅವಳಿಗೆ ಮೊದಲೇ ಒಂದು ಮದುವೆಯಾಗಿತ್ತು , ಅದನ್ನು ಮುಚ್ಚಿಟ್ಟು ಮದುವೆ ಮಾಡಿಕೊಡಲಾಗಿದೆ ಎಂದು ಆಕೆಯ ಪತಿಯ ದೊಡ್ಡಪ್ಪ ಮಂಜುನಾಥ್ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ರಾಜಶೇಖರ ಜೊತೆ ಮದುವೆಯಾಗುತ್ತಿದ್ದ ದಿನ ಹಳೆಯ ಗಂಡ ಪೋಲಿಸರ ಜೊತೆ ಕಲ್ಯಾಣ ಮಂಟಪಕ್ಕೇ ಬಂದಿದ್ದ, ಮಗಳು ಹಳೆಯ ಗಂಡನ ಜೊತೆ ಓಡಿ ಹೋಗುತ್ತಾಳೆ ಎಂಬ ಆತುರದಲ್ಲಿ ಆಕೆಯ ಪೋಷಕರು ವಿಚಾರ ಮುಚ್ಚಿಟ್ಟು ಮದುವೆಗೆ ಮುಂದಾಗಿದ್ದರು. ಒಪ್ಪದಿದ್ದಾಗ ತಂದೆ-ತಾಯಿ ವಿಷದ ಬಾಟಲಿ ಹಿಡಿದು ಬೆದರಿಸಿ ಒತ್ತಾಯಪೂರ್ವಕವಾಗಿ ರಾಜಶೇಖರ ಜೊತೆ ಮದುವೆಗೆ ಒಪ್ಪಿಸಿದ್ದರು ಎಂದು ಆರೋಪಿಸಿದ್ದಾರೆ. .

ಆಕೆಗೆ ಪೋಷಕರು ಮೊಬೈಲ್ ನೀಡುತ್ತಿರಲಿಲ್ಲ. ಮದುವೆಗೂ ಮುಂಚೆಯೇ ಮಗಳನ್ನು ರಾಜಶೇಖರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಮದುವೆಯಾದ ಬಳಿಕ ಮಗಳು ಎಲ್ಲಿ ಗಂಡನನ್ನು ಬಿಟ್ಟು ಓಡಿಬಂದು ಬಿಡುತ್ತಾಳೋ ಎಂಬ ಭಯದಿಂದ ಆಕೆಯ ಪೋಷಕರು ಆಗಾಗ ರಾಜಿ ಸಂಧಾನ ಮಾಡುತ್ತಿದ್ದರು ಎಂದು ರಾಜಶೇಖರ ದೊಡ್ಡಪ್ಪ ಮಂಜುನಾಥ್ ಆರೋಪಿಸಿದ್ದಾರೆ.

ಆಕೆಗೆ ಚೆನ್ನಾಗಿ ಈಜು ಬರುತ್ತಿತ್ತು. ಆಕೆ ನಿಜವಾಗಿಯೂ ನೀರಿನಲ್ಲಿ ಬಿದ್ದು ಸತ್ತಿದ್ದಾಳೋ ಅಥವಾ ಜೀವಂತವಾಗಿದ್ದು ಎಲ್ಲಾದರೂ ಓಡಿಹೋಗಿದ್ದಾಳೋ ಎಂಬ ಅನುಮಾನ ನಮಗಿದೆ ಎಂದು ಪತಿಯ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *