Thursday, November 19, 2026
Menu

ಕಾಡಾನೆ ದಾಳಿಗೆ ಸಾಕಾನೆ ರಾಮಯ್ಯ ಬಲಿ; ಕಣ್ಣೀರಿಟ್ಟ ಮಾವುತರು

ಉದಯಕಾಲ ನ್ಯೂಸ್, ಮೈಸೂರು/ಪಿರಿಯಾಪಟ್ಟಣ: ಮದವೇರಿದ ಕಾಡಾನೆಯೊಂದು ಶಿಬಿರಕ್ಕೆ ನುಗ್ಗಿ ನಡೆಸಿದ ಭೀಕರ ದಾಳಿಯಲ್ಲಿ 39 ವರ್ಷದ ಸಾಕಾನೆ ರಾಮಯ್ಯ ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ನಡೆದಿದೆ. ಆತ್ಮೀಯ ಒಡನಾಡಿಯಂತಿದ್ದ ರಾಮಯ್ಯನ ಸಾವಿನಿಂದ ಶಿಬಿರದ ಮಾವುತರು ಹಾಗೂ ಕಾವಾಡಿಗಳು ಕಣ್ಣೀರು ಹಾಕಿದ ಮನಕಲಕುವ ದೃಶ್ಯ ಕಂಡುಬಂತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ಈ ಸಾಕಾನೆ ಶಿಬಿರದಲ್ಲಿ ಮಂಗಳವಾರ ತಡರಾತ್ರಿ ಘಟನೆ ಸಂಭವಿಸಿದೆ. ಶಿಬಿರದ ಸಮೀಪಕ್ಕೆ ಬಂದ ಮದವೇರಿದ್ದ ಕಾಡಾನೆಯೊಂದು ಸೋಲಾರ್ ಬೇಲಿಯನ್ನು ಕಿತ್ತು ಹಾಕಿ ಒಳಗೆ ನುಗ್ಗಿದೆ. ಬಳಿಕ ಅಲ್ಲಿದ್ದ ಸಾಕಾನೆ ರಾಮಯ್ಯನೊಂದಿಗೆ ಭೀಕರ ಕಾದಾಟಕ್ಕೆ ಇಳಿದಿದೆ. ಇದನ್ನು ಗಮನಿಸಿದ ಶಿಬಿರದ ಮಾವುತರು ಹಾಗೂ ಕಾವಾಡಿಗಳು ಕಾಡಾನೆಯನ್ನು ಹಿಮ್ಮೆಟ್ಟಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಜತೆಗೆ ಇತರ ಸಾಕಾನೆಗಳೂ ಕಾದಾಟ ಬಿಡಿಸಲು ಯತ್ನಿಸಿದರೂ ಆ ಪ್ರಯತ್ನಗಳು ಫಲ ನೀಡಿಲ್ಲ. ಮದಗಜ ಬಹಳ ಹೊತ್ತು ತೀವ್ರವಾಗಿ ಗುದ್ದಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಮಯ್ಯ ಕೊನೆಯುಸಿರೆಳೆದಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2017ರಲ್ಲಿ ಸೆರೆ, ದೊಡ್ಡಹರವೆ ಶಿಬಿರದಲ್ಲಿ ನೆಲೆಸಿದ್ದ ರಾಮಯ್ಯ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಾಗರಹೊಳೆ ಉದ್ಯಾನವನದ ಡಿಸಿಎಫ್ ಸೌರಭ್ ಕುಮಾರ್, ಎಸಿಎಫ್ ಲಕ್ಷ್ಮಿಕಾಂತ್ ಹಾಗೂ ಆರ್‌ಎಫ್‌ಒ ಜಿ. ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯರಾದ ಡಾ. ಮುಜೀಬ್ ರೆಹಮಾನ್ ಮತ್ತು ಡಾ. ಮಧುಸೂದನ್ ಅವರು ಮೃತ ಸಾಕಾನೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಶಿಬಿರದ ಆವರಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಾಕಾನೆ ರಾಮಯ್ಯನ ಹಿನ್ನೆಲೆಯ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ರಾಮಯ್ಯನನ್ನು ಸೆರೆಹಿಡಿಯಲಾಗಿತ್ತು. ನಂತರ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಪಳಗಿಸಿ, 2024ರಿಂದ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಇರಿಸಲಾಗಿತ್ತು. ಕಾವಾಡಿಗಳಾದ ಮನೋಜ್ ಹಾಗೂ ಪ್ರಸನ್ನ ಸೇರಿದಂತೆ ಇತರ ಆನೆಗಳ ಮಾವುತರು ಮತ್ತು ಕಾವಾಡಿಗಳು ರಾಮಯ್ಯನ ಅಗಲಿಕೆಗೆ ತೀವ್ರ ಶೋಕ ವ್ಯಕ್ತಪಡಿಸಿ ಕಣ್ಣೀರು ಹಾಕಿದರು.

ಹಾಸನ, ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿಗೆ ಮೂವರು ಬಲಿ

ಮತ್ತೊಂದೆಡೆ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕಾಡಾನೆ ದಾಳಿಗೆ ಮೂವರು ಜೀವ ಕಳೆದುಕೊಂಡಿರುವ ದಾರುಣ ಘಟನೆಗಳು ನಡೆದಿದ್ದು, ಮಲೆನಾಡು ಹಾಗೂ ಅರೆಮಲೆನಾಡು ಭಾಗದ ಜನರಲ್ಲಿ ಆತಂಕ ಮನೆಮಾಡಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಶಾವರ ಗ್ರಾಮದ ಬಳಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಕುರಿಗಳನ್ನು ಮೇಯಿಸಲು ತೆರಳಿದ್ದ ಮಹಿಳೆ ಜಯಮ್ಮ ಸಾವನ್ನಪ್ಪಿದ್ದರು. ಜಯಮ್ಮ ಅವರ ಅಂತ್ಯಕ್ರಿಯೆ ನಡೆಯುವ ಮುನ್ನವೇ ಅದೇ ತಾಲೂಕಿನ ನಾಗೇನಹಳ್ಳಿ ಗ್ರಾಮದ ನಿವಾಸಿ ಹಫೀಸ್ ಉರ್ ರೆಹಮಾನ್ ಅಲಿಯಾಸ್ ಬಾಬು (57) ಎಂಬುವವರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ನಾಗೇನಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಹಫೀಸ್ ಕೆಲಸ ಮಾಡುತ್ತಿದ್ದ ವೇಳೆ ತೋಟದಲ್ಲೇ ಬೀಡುಬಿಟ್ಟಿದ್ದ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಹಫೀಸ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸರಣಿ ಸಾವುಗಳಿಂದ ಆಕ್ರೋಶಗೊಂಡ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.

ಈ ಘಟನೆಗಳ ಕಹಿ ನೆನಪು ಮಾಸುವ ಮುನ್ನವೇ ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕಾಡಾನೆ ದಾಳಿ ನಡೆದಿದೆ. ಎನ್.ಆರ್. ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಬುಧವಾರ ರೈತ ಕೃಷ್ಣಮೂರ್ತಿ ಸಾವನ್ನಪ್ಪಿದ್ದಾರೆ. ತೋಟದ ಬಳಿ ದನ ಹುಡುಕಲು ಕೃಷ್ಣಮೂರ್ತಿ ತೆರಳಿದ್ದಾಗ ಎದುರಾದ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಆನೆ-ಮಾನವ ಸಂಘರ್ಷವನ್ನು ತಡೆಗಟ್ಟಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದ್ದಾರೆ.

#Piriyapatna #WildElephantAttack #RamayyaElephant #Nagarahole #Hassan #Chikkamagaluru #HumanElephantConflict #ForestDepartment #Udayakala #KarnatakaNews

Related Posts

Leave a Reply

Your email address will not be published. Required fields are marked *