ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಅಸು ನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಮಗನ ಮದುವೆಗಾಗಿ ಕನ್ಯೆ ನೋಡಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಕಿತ್ನೂರು ಗ್ರಾಮದ ಸುಜಾತಾ (34), ನಾಗಪ್ಪ (58), ಕೊಟ್ರೇಶ್ (28) ಹಾಗೂ ತಿಮ್ಮಲಾಪುರದ ದುರ್ಗಪ್ಪ (55) ಮೃತಪಟ್ಟವರು. ಮಗ ಕೊಟ್ರೇಶನಿಗಾಗಿ ಹುಡುಗಿಯನ್ನು ನೋಡಲು ತಂದೆ ನಾಗಪ್ಪ ಹಾಗೂ ತಾಯಿ ಸುಜಾತಾ ಕಿತ್ನೂರು ಗ್ರಾಮದಿಂದ ಗಂಗಾವತಿ ಕಡೆಗೆ ಬೈಕ್ನಲ್ಲಿ ಹೊರಟಿದ್ದರು. ಮರಿಯಮ್ಮನಹಳ್ಳಿ, ಹೊಸಪೇಟೆಗೆ ಮಾರ್ಗವಾಗಿ ಬರುತ್ತಿದ್ದ ಬೆಳ್ಳುಳ್ಳಿ ತುಂಬಿದ್ದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ನಾಲ್ವರೂ ಮೃತಪಟ್ಟಿದ್ದಾರೆ.
ಚಿತ್ರದುರ್ಗದ ಕಡೆ ತೆರಳುತ್ತಿದ್ದ ಲಾರಿ ಅತಿವೇಗದಲ್ಲಿ ಸಂಚರಿಸುತ್ತಿತ್ತು, ನಿಯಂತ್ರಣ ತಪ್ಪಿದ ಲಾರಿ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ಕಾರು ಹಾಗೂ ಬಸ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೃತ ದೇಹಗಳು ಛಿದ್ರಗೊಂಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.


