ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವನೂ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆಯೊಂದು ಹಾಸನದ ಅರಸೀಕೆರೆ ತಾಲೂಕಿನ ಎನ್.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
12 ವರ್ಷದ ಪ್ರತೀಕ್ ಹಾಗೂ ಮಾವ 45 ವರ್ಷದ ಪ್ರಭಾಕರ್ ಮೃತಪಟ್ಟವರು. ಪ್ರತೀಕ್ ಬೇಸಿಗೆ ರಜೆಯಲ್ಲಿ ಮಾವ ಪ್ರಭಾಕರ್ ಅವರ ಮನೆಗೆ ಬಂದಿದ್ದ. ಮಾವನ ಜೊತೆಗೆ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರತೀಕ್ ಆಯತಪ್ಪಿ ಕೆರೆಗೆ ಬಿದ್ದಿದ್ದಾನೆ. ಕಾಲು ಜಾರಿ ಕೆರೆಗೆ ಬಿದ್ದ ಪ್ರತೀಕ್‌ನನ್ನು ರಕ್ಷಿಸಲು ಮಾವ ಪ್ರಭಾಕರ್ ಕೆರೆಗೆ ಹಾರಿದ್ದಾರೆ.
ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ಇಬ್ಬರೂ ಅಸು ನೀಗಿದ್ದಾರೆ. ಪ್ರತೀಕ್ ಪ್ರಭಾಕರ್ ಅವರ ಸೋದರಿಯ ಮಗ. ಬೇಸಿಗೆ ರಜೆ ಎಂದು ಸೋದರ ಮಾವನ ಮನೆಗೆ ಬಂದಿದ್ದ. ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದು, ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ಣಾ ನದಿಯಲ್ಲಿ ಮುಳುಗಿದ ಬಾಲಕ
ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಜಾಕವೆಲ್ ಹತ್ತಿರ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ರಾಹುಲ್ ಪ್ರಕಾಶ ಅಜ್ಜನವರ(11) ಮೃತ ಬಾಲಕ. ಶಾಲೆಗೆ ರಜೆ ಕಾರಣ ಬಾಲಕ ರಬಕವಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ.
ಬೆಳಗಿನ ಜಾವ ಸ್ನಾನಕ್ಕೆಂದು ತೆರಳಿದಾಗ ನೂರಾರು ಜನರ ಮಧ್ಯೆ ಬಾಲಕ ನೀರಿಗಿಳಿದು ಮುಳುಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಜೊತೆಗೆ ಬಂದಿದ್ದ ಸಂಬಂಧಿ ಹುಡುಕಾಟ ನಡೆಸಿದಾಗ ಬಾಲಕ ನೀರಿಗಿಳಿದ ವಿಚಾರ ಗೊತ್ತಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರಿನಿಂದ ಶವ ಹೊರಕ್ಕೆ ತೆಗೆದಿದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ಹೋಗಿ ವಿದ್ಯಾರ್ಥಿ ಸಾವು
ಕೊಪ್ಪಳ ಜಿಲ್ಲೆಯದದೇಗಲ್ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ಕುಕನೂರು ತಾಲೂಕಿನ ಮನ್ನಾಪುರ ಗ್ರಾಮದ ಆಕಾಶ ಹರಿಜನ(18) ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಲೆದುಕೊಂಡಿದ್ದಾನೆ.
ಒಂದೇ ಕುಟುಂಬದ ಆರು ಮಂದಿ ಕಾವೇರಿ ಪಾಲು
ಮೈಸೂರು ಕೆಆರ್ ನಗರ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಅಸು ನೀಗಿದ್ದಾರೆ. ಇವರೆಲ್ಲ ಕಾವೇರಿ ನದಿಯ ಸಮೀಪ ಅರ್ಕೇಶ್ವರ ದೇಗುಲದ ಬಳಿ ದರ್ಗಾಕ್ಕೆ ಬಂದಿದ್ದರು. ಮೈಸೂರಿನ 5 ವರ್ಷದ ಉಮೆರ್, ಬೆಂಗಳೂರಿನ 13 ವರ್ಷದ ಐಮನ್, ಕೆಆರ್ ನಗರದ 13 ವರ್ಷದ ಅಫೀಫ್, ಬೆಂಗಳೂರಿನ 23 ವರ್ಷದ ಯಾಸಿನ್, ಬೆಂಗಳೂರಿನ 22 ವರ್ಷದ ನೇಹಾ, ಊಟಿಯ 30 ವರ್ಷದ ಫಾತೀಮಾ ಮೃತಪಟ್ಟವರು.


