ಮದುವೆ ಸಿದ್ಧತೆಯಲ್ಲಿದ್ದ ಶಿರಸಿಯ ನ್ಯೂ KHB ಕಾಲೋನಿಯ ನಿವಾಸಿಯಾಗಿದ್ದ ವೈದ್ಯರೊಬ್ಬರು ಬ್ಯಾಂಕ್ ಲಾಕರ್‌ನಿಂದ ಒಡವೆಗಳನ್ನು ಮನೆಗೆ ತಂದಿಟ್ಟಿದ್ದು, ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆಗೈದು ಪರಾರಿಯಾಗಿದ್ದಾರೆ.
ವೈದ್ಯ ರಮೇಶ್ ಕಲಗುಟಕರ(51) ಕೊಲೆಯಾದ ವ್ಯಕ್ತಿ, ಇವರ ಪತ್ನಿ ಎಂಟು ತಿಂಗಳ ಹಿಂದೆ ಮೃತಪಟ್ಟಿದ್ದು, 45 ವರ್ಷದ ಅನ್ನಪೂರ್ಣ ಎಂಬ ಮಹಿಳೆಯ ಜೊತೆ ಮದುವೆಯಾಗಲು ಮಂಜಗುಣಿಯ ವೆಂಕಟರಮಣ ದೇವಸ್ಥಾನದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿತ್ತು.
ಇವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ಮತ್ತೊಬ್ಬ ಪಶ್ಚಿಮ ಬಂಗಾಳದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮೊದಲ ಪತ್ನಿಯ ಎಲ್ಲ ಒಡವೆಗಳನ್ನು ಎರಡನೇ ಪತ್ನಿಗೆ ಕೊಡಲೆಂದು ಬ್ಯಾಂಕಿನಿಂದ ತಂದು ಮನೆಯಲ್ಲಿಟ್ಟಿದ್ದರು.
ಎರಡನೇ ಮದುವೆಗೆಂದು ರಮೇಶ್ ಸಂಬಂಧಿಕರಿಗೆ ಆಹ್ವಾನ ನೀಡಿದ್ದರು. ಮನೆ ಬಳಿ ಬಂದ ನೆಂಟರಿಷ್ಟರು ಎಷ್ಟೇ ಬಾಗಿಲು ತಟ್ಟಿದರೂ ಡೋರ್ ಓಪನ್ ಮಾಡಿರಲಿಲ್ಲ. ಅನುಮಾನಗೊಂಡು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಎಸ್ಪಿ ದೀಪನ್, ಸಿಪಿಐ ಶಶಿಕಾಂತ ವರ್ಮಾ ಸೇರಿದಂತೆ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಇನ್ನೂ ಲಭಿಸಿಲ್ಲ.
ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ
ಮೈಸೂರಿನ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿ ಪತಿಯನ್ನು ಕೊಲೆ ಮಾಡಿರುವ ವಿಚಾರ ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ. ಜವರಪ್ಪ ಕೊಲೆಯಾದ ದುರ್ದೈವಿಯಾಗಿದ್ದು, ಕೊಲೆ ಆರೋಪಿಗಳಾದ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ಮತ್ತು ಕುರ್ಣೆಗಾಲ ಗ್ರಾಮದ ಅಮೃತಾ(26) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂಬ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.
ಜವರಪ್ಪ ಸಹೋದರ ರವಿ ನೀಡಿದ್ದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದು, ಆರೋಪಿ ಸಿದ್ದೇಶ್ಗೆ ಜವರಪ್ಪ ಪತ್ನಿ ಅಮೃತಾ ಜೊತೆಗೆ ಅಕ್ರಮ ಸಂಬಂಧ ಇತ್ತು. ಜವರಪ್ಪ ಇದ್ದರೆ ತಮ್ಮ ಸಂಬಂಧಕ್ಕೆ ತೊಂದರೆ ಆಗುತ್ತೆ ಎಂದು ಆರೋಪಿಗಳು ಕೊಲೆ ಮಾಡಿದ್ದರು ಎಂಬ ವಿಚಾರ ಬಯಲಾಗಿದೆ.
ಜವರಪ್ಪ- ಅಮೃತಾಗೆ ಇಬ್ಬರು ಮಕ್ಕಳು ಇದ್ದಾರೆ. 12 ದಿನಗಳ ಹಿಂದೆ ಮಕ್ಕಳೊಂದಿಗೆ ಹಬ್ಬಕ್ಕೆಂದು ಅಮೃತಾ ತವರಿಗೆ ಹೋಗಿದ್ದಳು. ಹೆಂಡತಿ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಜವರಪ್ಪ ಹಿಂದಿರುಗಿ ಬಂದಿರಲಿಲ್ಲ. ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿತ್ತು.


