ಹರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಭಾರತದ ಎರಡು ಹಡಗುಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಬಲಿಯಾಗಿದ್ದು, ಒಬ್ಬ ನಾವಿಕ ನಾಪತ್ತೆಯಾಗಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಭಾರತದ ‘ಜಾಗರ್ನವ್’ ಮತ್ತು ‘ಸನ್ಮಾರ್ ಹೆರಾಲ್ಡ್’ ಹಡಗುಗಳ ಮೇಲೆ ನಡೆದಿದೆ. ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿ ಹರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ತೆರೆಯಲಾಗುವುದು ಎಂದು ಇರಾನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.
ಭಾರತ ಸರ್ಕಾರ ಇರಾನ್ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ದಾಖಲಿಸಿದೆ ಹಾಗೂ ದಾಳಿಯ ಉದ್ದೇಶದ ಬಗ್ಗೆ ಉತ್ತರಿಸುವಂತೆ ಆಗ್ರಹಿಸಿದೆ. ಈ ಅಹಿತಕರ ಬೆಳವಣಿಗೆಯ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಕಳವಳ ವ್ಯಕ್ತಪಡಿಸಿದ್ದಾರೆ.
ಎರಡನೇ ಶಾಂತಿ ಮಾತುಕತೆ ಇರಸ್ಕರಿಸಿದ ಇರಾನ್
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ನೌಕಾ ದಿಗ್ಬಂಧನವನ್ನು ವಿರೋಧಿಸಿ ಇರಾನ್ ಈ ನಿಲುವು ತಾಳಿದೆ.
ಅಮೆರಿಕ ತನ್ನ ನಿರ್ಧಾರಗಳನ್ನು ಪದೇ ಪದೆ ಬದಲಿಸುತ್ತಿದೆ ಮತ್ತು ಕದನ ವಿರಾಮದ ನೀತಿಗಳನ್ನು ಉಲ್ಲಂಘಿಸಿ ನೌಕಾ ದಿಗ್ಬಂಧನದ ಮೂಲಕ ಬೆದರಿಕೆ ಹಾಕುತ್ತಿದೆ. ಇಂತಹ ವಾತಾವರಣದಲ್ಲಿ ರಚನಾತ್ಮಕ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಹೇಳಿದೆ.
ಟ್ರಂಪ್ ಈ ಮಾತುಕತೆಯ ಬಗ್ಗೆ ಆಶಾವಾದ ಹೊಂದಿದ್ದು, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜೇರೆಡ್ ಕುಶ್ನರ್ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದರು.


