ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ಎಸ್ಐಆರ್ (SIR) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ತಾನು ನೀಡಿದ್ದ ಹೇಳಿಕೆ ಮಾಧ್ಯಮಗಳಲ್ಲಿ ವಿವಾದಕ್ಕೆ ಗ್ರಾಸವಾಗುತ್ತಿದ್ದಂತೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ತಾವು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಷಡ್ಯಂತ್ರ ವಿಫಲ
ರಾಷ್ಟ್ರೀಯ ಮಾಧ್ಯಮ ಹಾಗೂ ಸ್ಥಳೀಯ ಸುದ್ದಿ ಮಾಧ್ಯಮಗಳಲ್ಲಿ ತಮ್ಮ ಹೇಳಿಕೆ ಬಿತ್ತರವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಚಿವರು, “ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಫಾರಂ–7 ಮೂಲಕ ಕಾಂಗ್ರೆಸ್ ಬೆಂಬಲಿಗ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸುವ ಬಿಜೆಪಿಯ ಷಡ್ಯಂತ್ರವನ್ನು ನಮ್ಮ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ ಅವರ ಹೋರಾಟ ಹಾಗೂ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ವಿಫಲಗೊಳಿಸಲಾಗಿದೆ ಎಂಬುದೇ ನನ್ನ ಹೇಳಿಕೆಯ ಮೂಲ ಉದ್ದೇಶವಾಗಿತ್ತು” ಎಂದಿದ್ದಾರೆ.
“SIR ಪ್ರಕ್ರಿಯೆ ಸಂಪೂರ್ಣವಾಗಿ ಸರಿ ಇದೆ ಎಂಬ ಅರ್ಥದಲ್ಲಿ ನಾನು ಯಾವುದೇ ಹೇಳಿಕೆ ನೀಡಿಲ್ಲ. ಅರ್ಹ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕುವ ಯತ್ನವನ್ನು ನಾವು ಬೆಳಗಾವಿ ಜಿಲ್ಲೆಯಿಂದಲೇ ಸಮರ್ಥವಾಗಿ ಎದುರಿಸಿ ಯಶಸ್ವಿಯಾಗಿದ್ದೇವೆ” ಎಂದು ಸಚಿವರು ಪುನರುಚ್ಚರಿಸಿದ್ದಾರೆ.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ರಾಹುಲ್ ಗಾಂಧಿ ಜತೆ ನಿಲ್ಲುತ್ತೇವೆ
ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಪ್ರತಿಯೊಬ್ಬ ನಾಗರೀಕನ ಮತದಾನದ ಹಕ್ಕಿನ ರಕ್ಷಣೆಗಾಗಿ ನಮ್ಮ ಹಿರಿಯ ನಾಯಕರಾದ ರಾಹುಲ್ ಗಾಂಧಿ ಅವರೊಂದಿಗೆ ದೃಢವಾಗಿ ನಿಲ್ಲುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಥವಾ ರಾಜಕೀಯ ದುರುದ್ದೇಶದಿಂದ ತೆಗೆದುಹಾಕುವ ಯಾವುದೇ ಪ್ರಯತ್ನವನ್ನು ತಮ್ಮ ವಿರೋಧವು ಸದಾಕಾಲ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನನ್ನ ಹೇಳಿಕೆಯ ನೈಜ ಆಶಯವನ್ನು ಅರ್ಥಮಾಡಿಕೊಳ್ಳಬೇಕೇ ಹೊರತು, ಅದನ್ನು ತಪ್ಪಾಗಿ ಗ್ರಹಿಸಬಾರದು ಎಂದು ಮನವಿ ಮಾಡಿದ್ದಾರೆ.
ಸಚಿವರ ಹಿಂದಿನ ಹೇಳಿಕೆ ಏನಾಗಿತ್ತು?
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ಹೇಳಿದ್ದರು. ಅಲ್ಲದೆ, ಇತರೆ ರಾಜ್ಯಗಳಲ್ಲಿ ನಡೆದಿರುವ ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಆಕ್ಷೇಪಣೆಗಳಿವೆ ಎಂದೂ ತಿಳಿಸಿದ್ದರು. ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಕೆಲವು ರಾಜ್ಯಗಳಲ್ಲಿ ಲೋಪದೋಷಗಳು ನಡೆದಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಸಚಿವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
#SatishJarakiholi #SIRProcess #CongressKarnataka #RahulGandhi #ElectionCommission #UdayakalaNews #KarnatakaPolitics

