ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ನ್ಯಾಯಾಂಗ ಸ್ವಾತಂತ್ರ್ಯವನ್ನು ಬಾಹ್ಯ ಒತ್ತಡಗಳಿಂದ ಮಾತ್ರವಲ್ಲದೆ ಸೂಕ್ಷ್ಮ ತಾಂತ್ರಿಕ ಅವಲಂಬನೆಯಿಂದಲೂ ಸಂರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅಲ್ಗಾರಿದಮಿಕ್ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆಯ ಖಾತರಿಯನ್ನು ಹಾಳುಮಾಡಬಹುದು. ಅಪಾರದರ್ಶಕ ವ್ಯವಸ್ಥೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯ ತಾರ್ಕಿಕ ನಿರ್ಧಾರಗಳ ಸಿದ್ಧಾಂತವನ್ನು ದುರ್ಬಲಗೊಳಿಸುವ ಆತಂಕವನ್ನು ಅಲ್ಲಗಳೆಯುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ನ್ಯಾಯಾಧೀಶರ ಅಧಿಕಾರವನ್ನು ಎಂದಿಗೂ ಅಲ್ಗಾರಿದಮ್‌ನ ಅಧಿಕಾರವು ಮರೆಮಾಡಬಾರದು. ಸಾಂವಿಧಾನಿಕ ನೈತಿಕತೆಯು ನೈಸರ್ಗಿಕ ಭಾವನೆಯಲ್ಲ, ಅದನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ನಮಗೆ ನೆನಪಿಸಿದ್ದರು. ಸಾಂವಿಧಾನಿಕ ಮೌಲ್ಯಗಳು ತಾಂತ್ರಿಕ ಅಳವಡಿಕೆಗೆ ಮಾರ್ಗದರ್ಶನ ನೀಡುತ್ತವೆಯೇ ಹೊರತು ಅದೇ ಪರ್ಯಾಯವಲ್ಲ ಎಂಬುದನ್ನು ಮನಗಾಣಬೇಕು ಎಂದರು.
ನಾವು ಕೃತಕ ಬುದ್ಧಿಮತ್ತೆಯ ಕಾಲಘಟ್ಟಕ್ಕೆ ಅಡಿಯಿಟ್ಟಿದ್ದೇವೆ. ಕೃತಕ ಬುದ್ಧಿಮತ್ತೆಯ ತಾಂತ್ರಿಕ ಬದಲಾವಣೆಯಿಂದಾಗಿ ಪ್ರಪಂಚದಾದ್ಯಂತದ ಸಂಸ್ಥೆಗಳು ಮರುರೂಪಿಸಲ್ಪಡುತ್ತಿರುವ ಪ್ರಸ್ತುತ ಸಮಯದಲ್ಲಿ, “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನ್ಯಾಯಾಂಗವನ್ನು ಮರುರೂಪಿಸುವುದು” ಎಂಬ ವಿಷಯದ ಕುರಿತ ಈ ಸಮ್ಮೇಳನವು ಬಹಳ ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು
ಕಾನೂನು ಮತ್ತು ತಂತ್ರಜ್ಞಾನವು ಪ್ರತ್ಯೇಕ ಕ್ಷೇತ್ರಗಳಾಗಿ ಉಳಿದಿಲ್ಲ. ಈಗ ಮುಂದುವರೆದು ನ್ಯಾಯಾಂಗ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆಯ ಪ್ರವೇಶವಾಗಿದೆ . ಅದರಿಂದಾಗಿ ಆಡಳಿತ, ಹಕ್ಕುಗಳು ಮತ್ತು ನ್ಯಾಯದ ಸ್ವರೂಪವನ್ನು ರೂಪಿಸುವ ಪರಸ್ಪರ ಸಂಬಂಧ ಹೊಂದಿರುವ ಶಕ್ತಿಗಳ ನಡುವೆ ನಿರ್ಣಾಯಕ ಹಂತದಲ್ಲಿ ನಾವು ಇಂದು ನಿಂತಿದ್ದೇವೆ. ನಾವು ಪುರಾವೆಗಳನ್ನು ಹೇಗೆ ಅರ್ಥೈಸಿಕೊಳ್ಳುತ್ತೇವೆ, ಸತ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಿರ್ಧಾರಗಳನ್ನು ಹೇಗೆ ತಲುಪುತ್ತೇವೆ ಎಂಬುದನ್ನು ಪ್ರಶ್ನಿಸುವ ಪರಿವರ್ತನಾ ಶಕ್ತಿಯಾಗಿ ಕೃತಕ ಬುದ್ಧಿಮತ್ತೆ ಹೊರಹೊಮ್ಮುತ್ತಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ತ್ವರಿತ ಕಾನೂನು ಸಂಶೋಧನೆ, ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸುಧಾರಿತ ನಿರ್ವಹಣೆ ವ್ಯವಸ್ಥೆಗಳ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಸಿಎಂ ವಿವರಿಸಿದರು.
ಇದೇ ಸಮಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುವುದರ ಕುರಿತು ಆಳವಾದ ಕಳವಳಗಳು ಮೂಡದೇ ಇರಲಾರದು. ಕೃತಕ ಬುದ್ಧಿಮತ್ತೆಯ ಸಾಕ್ಷಿ, ಪುರಾವೆಗಳು ನಮ್ಮ ಕಾನೂನು ವ್ಯವಸ್ಥೆಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಡೀಪ್‌ಫೇಕ್‌ಗಳು, ಸಂಶ್ಲೇಷಿತ ಡೇಟಾ, ಪುರಾವೆಗಳ ದೃಢೀಕರಣ ಸವಾಲಾಗಿ ಪರಿಣಮಿಸಿದೆ. ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಪುರಾವೆಗಳು ಯಾವುವು ಎಂಬುದನ್ನು ನಿರ್ಧರಿಸಲು ನ್ಯಾಯಾಲಯಗಳ ಅಗತ್ಯ ಹೆಚ್ಚುತ್ತಿದೆ. ಹಾಗೆ ಮಾಡುವಾಗ, ಸತ್ಯವು ಕೇವಲ ತಾಂತ್ರಿಕ ಅತ್ಯಾಧುನಿಕತೆಯಲ್ಲಿ ಅಲ್ಲ, ಪರಿಶೀಲನೆ ಮತ್ತು ಸಮಗ್ರತೆಯ ಮೇಲೆ ಆಧಾರಿತವಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದರು. .
ಭಾರತದಲ್ಲಿ ಕೃತಕ ಬುದ್ಧಿಮತ್ತೆಗಾಗಿ ನಿಯಂತ್ರಕ ಚೌಕಟ್ಟನ್ನು ರೂಪಿಸುವಲ್ಲಿ ನ್ಯಾಯಾಂಗವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸರಿಯಾದ ಪ್ರಕ್ರಿಯೆ, ಅನುಪಾತ ಮತ್ತು ಗೌಪ್ಯತೆಯ ಹಕ್ಕಿನ ಸಂರಕ್ಷಣೆಯಂತಹ ಸುಸ್ಥಾಪಿತ ಸಾಂವಿಧಾನಿಕ ಸಿದ್ಧಾಂತಗಳ ಮೂಲಕ ಕೃತಕ ಬುದ್ಧಿಮತ್ತೆಯ ಪರಿಧಿಯನ್ನು ನಿರ್ಧರಿಸಬೇಕಿದೆ. ನ್ಯಾಯಾಂಗವು ತಂತ್ರಜ್ಞಾನದ ಬಳಕೆದಾರ ಮಾತ್ರವಲ್ಲದೆ ಸಮಾಜದಲ್ಲಿ ಅದರ ನಿಯೋಜನೆಗೆ ಮಾರ್ಗದರ್ಶನ ನೀಡುವ ನೈತಿಕ ದಿಕ್ಸೂಚಿಯೂ ಆಗಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೂಲಭೂತ ತತ್ವಗಳನ್ನು ಕೃತಕ ಬುದ್ಧಿಮತ್ತೆ ಹೇಗೆ ಸಂಧಿಸಲಿದೆ ಎನ್ನುವುದು ನಮ್ಮ ಮುಂದಿರುವ ಬಹು ಮುಖ್ಯ ಪ್ರಶ್ನೆಯಾಗಿದೆ. ಸೂಕ್ತ ರೀತಿಯಲ್ಲಿ ವಿನ್ಯಾಸಗೊಳಿಸಿ ನಿಯಂತ್ರಿಸದಿದ್ದರೆ, ಎ ಐ ವ್ಯವಸ್ಥೆಗಳು ಈಗಾಗಲೇ ಅಸ್ತಿತ್ವದಲ್ಲಿರುವ ಸಾಮಾಜಿಕ ಅಸಮಾನತೆಗಳನ್ನು ಪುನರಾವರ್ತಿಸಬಹುದು ಹಾಗೂ ವೃದ್ಧಿಸಲೂ ಸಾಧ್ಯವಿದೆ. ಜಾತಿ, ವರ್ಗ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಇರುವ ಪಕ್ಷಪಾತವನ್ನು ಭದ್ರಪಡಿಸುವ ಮೂಲಕ ಒಂದು ರೀತಿಯ ಡಿಜಿಟಲ್ ಸೋಶಿಯಲ್ ಡಾರ್ವಿನಿಸಂ ಸೃಷ್ಟಿಸಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಆಲ್ಗೊರಿದಂ ಮೂಲಕ ಬಲಪಡಿಸಿ, ನ್ಯಾಯದ ಬುನಾದಿಯನ್ನೇ ದುರ್ಬಲಗೊಳಿಸಲಿದೆ ಎಂದು ಎಚ್ಚರಿಸಿದರು.
ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಪ್ರವೇಶವನ್ನು ಸುಧಾರಿಸಬೇಕೆನ್ನುವ ಬಲವಾದ ಅಗತ್ಯವಿದೆ. ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾದರೆ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಯಾವುದೇ ಆಲ್ಗೊರಿದಂ ಸಹಾನುಭೂತಿ, ಅನುಭವಗಳ ಜ್ಞಾನ ಅಥವಾ ನಿರ್ಣಯಗಳನ್ನು ಕೈಗೊಳ್ಳುವಾಗಿನ ನೈತಿಕ ತರ್ಕವನ್ನು ಬದಲಾಯಿಸಲು ಸಾಧ್ಯವಿಲ್ಲ. ತಂತ್ರಜ್ಞಾನ ನೆರವು ಒದಗಿಸಬಹುದು, ಆದರೆ ನ್ಯಾಯದ ಹೃದಯವಾದ
ಮಾನವ ಆತ್ಮಸಾಕ್ಷಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಸಮ್ಮೇಳನವು ನ್ಯಾಯಾಂಗದ ಭವಿಷ್ಯದ ಬಗ್ಗೆ ಯೋಚಿಸಲು ಮಾತ್ರವಲ್ಲದೆ ಸ್ಪಷ್ಟತೆ, ದೂರದೃಷಿ ಹಾಗೂ ಜವಾಬ್ದಾರಿಯಿಂದ ರೂಪಿಸಲು ಅವಕಾಶ ಒದಗಿಸಿದೆ. ತಾಂತ್ರಿಕವಾಗಿ ಮುಂದುವರಿದ, ಸಾಂವಿಧಾನಿಕ ತಳಹದಿಯನ್ನು ಹೊಂದಿದ ಮತ್ತು ಸಾಮಾಜಿಕವಾಗಿ ನ್ಯಾಯಯುತ ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಮಿಸಲು ಇಲ್ಲಿನ ಚರ್ಚೆ ಅರ್ಥಪೂರ್ಣ ಕೊಡುಗೆ ನೀಡಲಿದೆ ಎಂದು ನಂಬಿದ್ದೇನೆ. ಎಂದರು.


