Saturday, October 31, 2026
Menu

ಕಾಂಗ್ರೆಸ್‌ ಸರ್ಕಾರದ ಬೊಕ್ಕಸ ಭರ್ತಿಗೆ ಕೆಎಂಎಫ್‌ ಗುತ್ತಿಗೆ ಸಂಸ್ಥೆ: ಸಚಿವ ಪ್ರಹ್ಲಾದ್‌ ಜೋಶಿ ತೀವ್ರ ಆಕ್ರೋಶ!

ಉದಯಕಾಲ ನ್ಯೂಸ್,ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ದುರಾಡಳಿತದಿಂದ ಖಾಲಿಯಾಗಿರುವ ಬೊಕ್ಕಸವನ್ನು ತುಂಬಿಕೊಳ್ಳಲು ಸರ್ಕಾರವು ನೇರವಾಗಿ ‘ಕೆಎಂಎಫ್’ (KMF) ಸಂಸ್ಥೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. ನಂದಿನಿ ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಮೊಸರಿನ ದರವನ್ನೂ ಸಹ ಗಗನಕ್ಕೇರಿಸಿರುವುದು ಶ್ರೀಸಾಮಾನ್ಯರ ಬದುಕಿಗೆ ದೊಡ್ಡ ಪೆಟ್ಟು ನೀಡಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರಲಾಗುತ್ತಿದ್ದು, ಬೆಲೆ ಏರಿಕೆಯಲ್ಲಿ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದವರು ಇಂದು ಬಡವರು ಹಾಗೂ ಮಧ್ಯಮ ವರ್ಗದವರ ಹೊಟ್ಟೆಮೇಲೆ ಹೊಡೆಯುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಮೊಸರಿನ ಬೆಲೆ ಅತಿ ದುಬಾರಿ

ಅರ್ಧ ಲೀಟರ್ ನಂದಿನಿ ಮೊಸರಿನ ಬೆಲೆಯನ್ನು 28 ರೂ. ನಿಂದ ಏಕಾಏಕಿ 34 ರೂ.ಗೆ (ಶೇ. 21.43 ರಷ್ಟು ಅಂದರೆ 6 ರೂ. ಹೆಚ್ಚಳ) ಏರಿಸಲಾಗಿದೆ.ಒಂದು ಲೀಟರ್ ಮೊಸರಿನ ಬೆಲೆಯನ್ನು 54 ರೂ. ನಿಂದ ಬರೋಬ್ಬರಿ 68 ರೂ.ಗೆ (ಶೇ. 25.93 ರಷ್ಟು ಅಂದರೆ 14 ರೂ. ಭಾರಿ ಏರಿಕೆ) ಹೆಚ್ಚಿಸಲಾಗಿದೆ.

ಸಾಮಾನ್ಯರ ಜೇಬಿಗೆ ಕನ್ನ

ಹಾಲಿನ ದರ ಏರಿಕೆಯ ಬೆನ್ನಲ್ಲೇ ಮೊಸರಿನ ದರವನ್ನೂ ವಿಪರೀತವಾಗಿ ಹೆಚ್ಚಿಸಿರುವುದು ಸರ್ಕಾರದ ಜನವಿರೋಧಿ ನೀತಿಗೆ ಕೈಗನ್ನಡಿಯಾಗಿದೆ ಎಂದು ಜೋಶಿ ಆರೋಪಿಸಿದ್ದಾರೆ ಸರ್ಕಾರದ ತಪ್ಪು ಆಡಳಿತ ಹಾಗೂ ಯೋಜನೆಗಳ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೆಎಂಎಫ್ ಉತ್ಪನ್ನಗಳ ಬೆಲೆ ಏರಿಕೆ ಮೂಲಕ ಕಡುಬಡವರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

#PralhadJoshi #KMFNandini #CurdPriceHike #MilkPriceHike #CongressGovernment #KarnatakaNews #UdayakalaNews #CommonManBurden

Related Posts

Leave a Reply

Your email address will not be published. Required fields are marked *