ಉದಯಕಾಲ ನ್ಯೂಸ್,ಬಾಗಲಕೋಟೆ: ಶಾಲೆಯ ಮೆಟ್ಟಿಲೇರದೆಯೇ ಕೇವಲ ಸೂಜಿ-ದಾರದ ಚಳಕದಿಂದ ಸಾಂಪ್ರದಾಯಿಕ ಕೌದಿ ಕಲೆಗೆ ಜೀವತುಂಬಿ ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕೋಡಿಹಾಳ ಗ್ರಾಮದ ಗೋಂದಳಿ ಬುಡುಬುಡುಕಿ (ವಿಮುಕ್ತ ಬುಡಕಟ್ಟು) ಸಮುದಾಯದ ಪ್ರತಿಭಾವಂತ ಕಲಾವಿದೆ ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ್ ಅವರಿಗೆ 2025–26ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಒಲಿದುಬಂದಿದೆ.
ಬಡತನ ಹಾಗೂ ಅನಕ್ಷರತೆಯ ನಡುವೆಯೂ ತಮ್ಮ ಕುಲಕಸುಬನ್ನು ಬಿಡದೆ ಮುಂದುವರಿಸಿಕೊಂಡು ಬಂದ ಗ್ರಾಮೀಣ ಮಹಿಳೆಯೊಬ್ಬರ ಅಪರೂಪದ ಕಲಾ ಸಾಧನೆಗೆ ನಾಡಿನ ಅತ್ಯುನ್ನತ ಗೌರವ ಸಿಕ್ಕಿರುವುದು ಇಡೀ ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದೆ. ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದರೂ, ರುಕ್ಮಿಣಿಬಾಯಿ ಅವರು ಹಳೆಯ ಬಟ್ಟೆಗಳ ಚಿಂದಿಗಳನ್ನು ಬಳಸಿ ಜ್ಯಾಮಿತೀಯ ಆಕಾರಗಳು, ಪ್ರಕೃತಿಯ ವಿನ್ಯಾಸಗಳು ಹಾಗೂ ವಿಶಿಷ್ಟ ಚಿತ್ತಾರಗಳ ಕೌದಿಗಳನ್ನು ಹೊಲಿಯುವ ಮೂಲಕ ಕಲೆಯ ಲೋಕವನ್ನೇ ಸೃಷ್ಟಿಸಿದ್ದಾರೆ.
ಕೌದಿ ಕಲೆಗೆ ರಾಜ್ಯಮಟ್ಟದ ಮನ್ನಣೆ
ಸಾಂಪ್ರದಾಯಿಕ ‘ಕೌದಿ’ ಕಸೂತಿಯನ್ನು ಕೇವಲ ಕುಲಕಸುಬಾಗಿ ನೋಡದೆ, ಅದರಲ್ಲಿ ಹೊಸ ಆಯಾಮಗಳನ್ನು ಕಂಡುಹಿಡಿದು ಕಲೆಗೆ ಜೀವ ತುಂಬಿರುವ ರುಕ್ಮಿಣಿಬಾಯಿ ಅವರ ಪರಿಶ್ರಮವನ್ನು ಸರ್ಕಾರ ಸಂಕೀರ್ಣ ವಿಭಾಗದಲ್ಲಿ ಗುರುತಿಸಿದೆ. ಓದು-ಬರಹ ಬಾರದಿದ್ದರೂ, ಸೂಜಿ-ದಾರವೇ ತಮ್ಮ ಸರ್ವಸ್ವ ಎಂದು ನಂಬಿ ಬಾಲ್ಯದಿಂದಲೂ ಕೌದಿ ಹೊಲಿಯುವುದನ್ನೇ ಸಾಧನೆಯಾಗಿರಿಸಿಕೊಂಡಿದ್ದಾರೆ.
ಸಮುದಾಯಕ್ಕೆ ಹೆಮ್ಮೆಯ ಕ್ಷಣ
ವಿಮುಕ್ತ ಬುಡಕಟ್ಟು ಸಮುದಾಯದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಇವರ ಸಾಧನೆ, ಕೋಡಿಹಾಳ ಗ್ರಾಮ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕದ ಕರಕುಶಲ ಕಲಾವಿದರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಸರ್ಕಾರದ ಈ ಗೌರವ ತಮ್ಮ ಇಡೀ ಕುಟುಂಬ ಹಾಗೂ ಸಮುದಾಯಕ್ಕೆ ಅಪಾರ ಸಂತೋಷ ತಂದಿದ್ದು, ಶಕ್ತಿ ಇರುವವರೆಗೆ ಈ ಕರಕುಶಲ ಕಳೆಯನ್ನು ಉಳಿಸಿ ಬೆಳೆಸುವುದಾಗಿ ರುಕ್ಮಿಣಿಬಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
#KaveriKannadaRajyotsava #RukminibaiVashtar #KaudiArt #BagalkotNews #Ilkal #TraditionalArt #KarnatakaRajyotsavaAward #UdayakalaNews


