ಉದಯಕಾಲ ನ್ಯೂಸ್, ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ವಿಶಿಷ್ಟ ಶೈಲಿಯ ಮಲ್ಟಿ-ಸ್ಟಾರರ್ ಹಾಗೂ ಕ್ರೈಮ್ ಥ್ರಿಲ್ಲರ್ ಚಿತ್ರಗಳ ಮೂಲಕ ಕರಾಮತ್ತು ಮೆರೆದಿದ್ದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಸಂಜಯ್ ಗುಪ್ತಾ (57) ಅವರು ಅನಿರೀಕ್ಷಿತ ದುರ್ಘಟನೆಯೊಂದರಲ್ಲಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಮನೆಯ ಬಾತ್ರೂಮ್‌ನಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟುಬಿದ್ದು (Head Injury) ಅವರು ಕೊನೆಯುಸಿರೆಳೆದಿರುವುದು ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.
ಅಕ್ಟೋಬರ್ 30ರಂದು ತಮ್ಮ ನಿವಾಸದಲ್ಲಿ ಈ ಅಪಘಾತ ಸಂಭವಿಸಿದ್ದು, ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಆಘಾತಕಾರಿ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. “ನಮ್ಮ ಆತ್ಮೀಯ ಸ್ನೇಹಿತ, ಅತ್ಯಂತ ಪ್ರತಿಭಾವಂತ ನಿರ್ದೇಶಕ ಸಂಜಯ್ ಗುಪ್ತಾ ನಮ್ಮನ್ನು ಅಗಲಿದ್ದಾರೆ. ಮನೆಯಲ್ಲಿ ತಲೆಗೆ ಆದ ಗಾಯದಿಂದಾಗಿ ಅವರು ನಿಧನರಾಗಿರುವುದು ನಂಬಲಸಾಧ್ಯವಾಗಿದೆ” ಎಂದು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಂಬೈನ ತಮ್ಮ ನಿವಾಸದಲ್ಲಿ ಸ್ನಾನಗೃಹದಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯವಾಗಿದ್ದರಿಂದ ಅವರು ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.ಸೂಪರ್‌ಸ್ಟಾರ್ ಸಂಜಯ್ ದತ್ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದ ಸಂಜಯ್ ಗುಪ್ತಾ, ‘ಕಾಂಟೆ, ‘ಮುಸಾಫಿರ್’, ‘ಝಿಂದಾ’ ಹಾಗೂ ‘ಶೂಟೌಟ್ ಅಟ್ ಲೋಖಂಡವಾಲಾ’ದಂತಹ ಭರ್ಜರಿ ಹಿಟ್ ಸಿನಿಮಾಗಳನ್ನು ನೀಡಿದ್ದರು.
ವಿಶಿಷ್ಟ ಶೈಲಿಯ ನಿರ್ದೇಶನ
1994ರಲ್ಲಿ ಬಿಡುಗಡೆಯಾದ ‘ಆತಿಶ್’ ಚಿತ್ರದ ಮೂಲಕ ನಿರ್ದೇಶಕರಾಗಿ ಪಯಣ ಆರಂಭಿಸಿದ್ದ ಇವರು, ಅಂಡರ್‌ವರ್ಲ್ಡ್ ಹಾಗೂ ಸ್ಟೈಲಿಶ್ ಆಕ್ಷನ್ ಕಥಾನಕಗಳ ಮೂಲಕ ಬಾಲಿವುಡ್‌ನಲ್ಲಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದ್ದರು.
ಹ್ರತಿಕ್ ರೋಷನ್ ಅಭಿನಯದ ‘ಕಾಬಿಲ್’, ಜಾನ್ ಅಬ್ರಾಹಂ ಅವರ ‘ಮುಂಬೈ ಸಾಗಾ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ನೀಡಿದ ಅವರ ಅಕಾಲಿಕ ನಿಧನಕ್ಕೆ ತರಣ್ ಆದರ್ಶ್ ಸೇರಿದಂತೆ ಬಾಲಿವುಡ್‌ನ ಗಣ್ಯರು ಕಂಬನಿ ಮಿಡಿದಿದ್ದು, ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದಿದ್ದಾರೆ.
#SanjayGupta #BollywoodDirector #Kaante #ShootoutAtLokhandwala #FilmNews #UdayakalaNews #BollywoodDemise

