Saturday, October 31, 2026
Menu

ಶೂ ಕಾರ್ಖಾನೆಯ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರ ದುರ್ಮರಣ!

ಉದಯಕಾಲ ನ್ಯೂಸ್, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ಸಾವಿನ ಸುದ್ದಿಗಳು ಹೆಚ್ಚುತ್ತಿವೆ. ರಾಜಧಾನಿಯಲ್ಲಿ ಮತ್ತೊಮ್ಮೆ ದೊಡ್ಡಮಟ್ಟದ ಅಗ್ನಿ ದುರಂತ ಸಂಭವಿಸಿದ್ದು, ವಾಯುವ್ಯ ದೆಹಲಿಯ ಮಂಗೋಲ್‌ಪುರಿ ಕೈಗಾರಿಕಾ ಪ್ರದೇಶದಲ್ಲಿರುವ ಶೂ ತಯಾರಿಕಾ ಕಾರ್ಖಾನೆಯೊಂದರಲ್ಲಿ ರಾತ್ರಿ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ಭೀಕರ ಅವಘಡದಲ್ಲಿ ಕಾರ್ಖಾನೆಯ ಒಳಗೆ ದಟ್ಟ ಹೊಗೆ ಆವರಿಸಿ ಉಸಿರುಗಟ್ಟಿ ನಾಲ್ವರು ದುರ್ದೈವಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಶುಕ್ರವಾರ ರಾತ್ರಿ 9:30ರ ಸುಮಾರಿಗೆ ಘಟನೆ ನಡೆದಿದ್ದು, ಮಾಹಿತಿ ತಿಳಿದ ಕೂಡಲೇ ದೆಹಲಿ ಅಗ್ನಿಶಾಮಕ ದಳದ 20ಕ್ಕೂ ಹೆಚ್ಚು ವಾಹನಗಳು ಧಾವಿಸಿ ಬಂದು ಭಾರಿ ಕಾರ್ಯಾಚರಣೆ ನಡೆಸಿವೆ. ಕಾರ್ಖಾನೆಯ ನೆಲಮಹಡಿಯಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಸಮಯೋಚಿತವಾಗಿ ಮೇಲಂತಸ್ತಿಗೆ ಹರಡದಂತೆ ತಡೆದಿದ್ದಾರೆ. ಆದಾಗ್ಯೂ, ಉತ್ಪಾದನಾ ಸಾಮಗ್ರಿಗಳಿಂದ ಹೊರಹೊಮ್ಮಿದ ವಿಪರೀತ ದಟ್ಟ ಹೊಗೆ ಕಟ್ಟಡದ ಮೇಲಿನ ಮಹಡಿಗಳಿಗೆ ಆವರಿಸಿದ್ದರಿಂದ ಕಾರ್ಮಿಕರು ಉಸಿರಾಡಲು ಪರದಾಡಿದ್ದಾರೆ.

ಪ್ರಾಣಾಪಾಯ ಮತ್ತು ರಕ್ಷಣೆ

ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಮೂರನೇ ಹಾಗೂ ನಾಲ್ಕನೇ ಮಹಡಿಯ ಮೆಟ್ಟಿಲುಗಳ ಬಳಿ ಅಸ್ವಸ್ಥಗೊಂಡಿದ್ದ ಒಟ್ಟು ಆರು ಮಂದಿಯನ್ನು ರಕ್ಷಿಸಿ ತಕ್ಷಣವೇ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಪರೀಕ್ಷಿಸಿದ ವೈದ್ಯರು ನಾಲ್ವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೊದಲು ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ಅಲ್ಲಿಯೇ ನಿಯಂತ್ರಿಸಲಾಯಿತು. ಆದರೆ ಭಾರೀ ಪ್ರಮಾಣದ ಹೊಗೆ ಇಡೀ ಕಟ್ಟಡಕ್ಕೆ ಆವರಿಸಿದ್ದರಿಂದ ಉಸಿರುಗಟ್ಟುವಿಕೆ ಉಂಟಾಗಿದೆ ಎಂದು ಎಡಿಒ ಪರಸ್ ಕುಮಾರ್ ತಿಳಿಸಿದ್ದಾರೆ.

ಮಾಲೀಕರಿಗೆ ಸಮನ್ಸ್ ಹಾಗೂ ತನಿಖೆ

ಘಟನೆಗೆ ಶಾರ್ಟ್‌ ಸರ್ಕಿಟ್‌ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಕಾರ್ಖಾನೆಯ ಮಾಲೀಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಕಾರ್ಖಾನೆಯಲ್ಲಿ ಒಟ್ಟು ಎಷ್ಟು ಜನ ಕಾರ್ಮಿಕರಿದ್ದರು ಎಂಬುದನ್ನು ಪತ್ತೆಹಚ್ಚಲು ಗುತ್ತಿಗೆದಾರರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ವಿಕ್ರಮ್ ಸಿಂಗ್ ಮಾಹಿತಿ ನೀಡಿದ್ದಾರೆ.

#DelhiFire #Mangolpuri #ShoeFactoryFire #DelhiNews #FireAccident #UdayakalaNews #BreakingNews

Related Posts

Leave a Reply

Your email address will not be published. Required fields are marked *