ರಾಯಚೂರು: ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ವಾಸ್ತವ ಚಿತ್ರಣ ತಿಳಿಯಲು ಆಗಮಿಸಿರುವ ಕೇಂದ್ರದ ಅಂತರ್ ಸಚಿವಾಲಯದ ಬರ ಅಧ್ಯಯನ ತಂಡವು ರಾಯಚೂರು ಜಿಲ್ಲೆಯಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೆ ಬೆಳೆ ಹಾನಿ ಪರಿಶೀಲನೆ ನಡೆಸಿದೆ. ಆದರೆ ಸಂಜೆ ಕತ್ತಲು ಆವರಿಸಿದ ಬಳಿಕ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬೆಳೆ ವೀಕ್ಷಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ. ಮಾನಸಿಂಗ್ ನೇತೃತ್ವದ ಕೇಂದ್ರ ಅಧಿಕಾರಿಗಳ ತಂಡವು ರಾಯಚೂರು ಜಿಲ್ಲೆಯಲ್ಲಿ ಭಾನುವಾರ ಬಿರುಸಿನ ಪ್ರವಾಸ ಕೈಗೊಂಡಿತ್ತು. ಜಿಲ್ಲೆಯ ದೇವದುರ್ಗ, ಲಿಂಗಸೂಗೂರು ಹಾಗೂ ಮಸ್ಕಿ ತಾಲೂಕುಗಳಲ್ಲಿ ಸಂಚರಿಸಿ ಬರ ಅಧ್ಯಯನ ನಡೆಸಿದ ತಂಡವು, ಪ್ರಮುಖವಾಗಿ ಮೆಣಸಿನಕಾಯಿ, ಹತ್ತಿ ಹಾಗೂ ತೊಗರಿ ಬೆಳೆಗೆ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಕಲೆಹಾಕಿತು.
ಮಸ್ಕಿಯಲ್ಲಿ ಕತ್ತಲಲ್ಲಿ ಪರಿಶೀಲನೆ
ಮಸ್ಕಿ ತಾಲೂಕಿನ ಅಮೀನಗಡ ಗ್ರಾಮಕ್ಕೆ ಕೇಂದ್ರ ತಂಡ ಭೇಟಿ ನೀಡಿ ತೊಗರಿ ಬೆಳೆ ಪರಿಶೀಲನೆ ನಡೆಸಬೇಕಿತ್ತು. ನಿಗದಿತ ಸಮಯಕ್ಕಿಂತಲೂ ಸುಮಾರು ಒಂದೂವರೆ ಗಂಟೆ ತಡವಾಗಿ ಸಂಜೆ 6:30ರ ಸುಮಾರಿಗೆ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳ ತಂಡ, ಕತ್ತಲು ಕವಿದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಮೊಬೈಲ್ ಟಾರ್ಚ್ ಹಾಕಿ ಬೆಳೆಗಳನ್ನು ವೀಕ್ಷಿಸಿತು.
ರೈತರ ಆಕ್ರೋಶ
ಕತ್ತಲಲ್ಲಿ, ಅದೂ ಕೇವಲ ರಸ್ತೆ ಬದಿಯ ಜಮೀನುಗಳಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬರ ಸಮೀಕ್ಷೆ ನಡೆಸಿರುವುದಕ್ಕೆ ಸ್ಥಳೀಯ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂಪೂರ್ಣವಾಗಿ ಬೆಳೆನಾಶವಾಗಿ ಕಷ್ಟದಲ್ಲಿರುವ ರೈತರ ಒಳಹೊಲಗಳಿಗೆ ತೆರಳಿ ವಾಸ್ತವ ಪರಿಸ್ಥಿತಿ ಪರಿಶೀಲಿಸದೆ, ಈ ರೀತಿ ಕತ್ತಲಲ್ಲಿ ತರಾತುರಿಯಲ್ಲಿ ಸಮೀಕ್ಷೆ ನಡೆಸಿದರೆ ನಮಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿ ಅಳಲು ತೋಡಿಕೊಂಡರು. ಆದರೂ ಇದಕ್ಕೆ ಸೊಪ್ಪು ಹಾಕದ ತಂಡ ರಾತ್ರಿಯಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೇಂದ್ರ ತಂಡ ಮಾಹಿತಿ ಸಂಗ್ರಹಣೆ ಮುಂದುವರೆಸಿತ್ತು.
#RaichurDrought #CentralTeam #MobileTorchSurvey #KarnatakaDrought #Maski #RaichurNews #UdayakalaNews #FarmerProtest #DroughtAssessment2026
—


