ಉದಯಕಾಲ ನ್ಯೂಸ್, ಬೆಂಗಳೂರು: ಕೃಷಿ ಮಾರುಕಟ್ಟೆಗಳಲ್ಲಿ ಅನ್ನದಾತರಿಗೆ ಅನ್ಯಾಯವಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರೈತರು ಮಾರುಕಟ್ಟೆಗೆ ತರುವ ಉತ್ಪನ್ನಗಳ ತೂಕದಲ್ಲಿ ಮೋಸ ಮಾಡುತ್ತಿರುವ ಹಾಗೂ ದೋಷಪೂರಿತ ತೂಕದ ಯಂತ್ರಗಳನ್ನು ಬಳಸುತ್ತಿರುವ ವರ್ತಕರ ವಿರುದ್ಧ ಕಾನೂನು ಮಾಪನ ಶಾಸ್ತ್ರ ಇಲಾಖೆಯು ರಾಜ್ಯಾದ್ಯಂತ ದಿಢೀರ್ ಕಾರ್ಯಾಚರಣೆ ನಡೆಸಿದೆ. ಈ ಹಠಾತ್ ತಪಾಸಣೆಯ ವೇಳೆ ನಿಯಮ ಉಲ್ಲಂಘಿಸಿ ವಂಚನೆ ಎಸಗುತ್ತಿದ್ದ ಬರೋಬ್ಬರಿ 275 ವರ್ತಕರ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು 9.8 ಲಕ್ಷ ರೂಪಾಯಿಗಳಷ್ಟು ಭಾರಿ ದಂಡ ವಿಧಿಸಲಾಗಿದೆ.
ರೈತರಿಗೆ ತೂಕದಲ್ಲಿ ದೊಡ್ಡ ಮಟ್ಟದ ಮೋಸ ಮಾಡಲಾಗುತ್ತಿದೆ ಎಂಬ ಸರಣಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
9 ಪ್ರಮುಖ ಮಾರುಕಟ್ಟೆಗಳಲ್ಲಿ 711 ಅಂಗಡಿಗಳ ದಿಢೀರ್ ತಪಾಸಣೆ
ರಾಜ್ಯದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಏಕಕಾಲದಲ್ಲಿ ಹಠಾತ್ ತಪಾಸಣೆ ನಡೆಸಿತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬ್ಯಾಡಗಿ, ತುಮಕೂರು, ರಾಯಚೂರು ಹಾಗೂ ಗಂಗಾವತಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಈ ಪರಿಶೀಲನೆ ಮುಂದುವರಿಯಿತು. ಒಟ್ಟು 9 ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ಬರುವ 711 ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ವೇಳೆ ತೂಕದಲ್ಲಿ ವಂಚನೆ ಮಾಡುವುದು, ದೋಷಪೂರಿತ ಯಂತ್ರಗಳನ್ನು ಬಳಸುವುದು, ನಿಗದಿತ ಅವಧಿಯೊಳಗೆ ಇಲಾಖೆಯಿಂದ ತೂಕದ ಯಂತ್ರಗಳ ಸತ್ಯಾಪನೆ ಹಾಗೂ ಮುದ್ರೆ ಮಾಡಿಸಿಕೊಳ್ಳದಿರುವುದು ಮತ್ತು ಸತ್ಯಾಪನೆ ಪ್ರಮಾಣಪತ್ರವನ್ನು ಅಂಗಡಿಗಳಲ್ಲಿ ಪ್ರದರ್ಶನ ಮಾಡದಿರುವುದು ಬೆಳಕಿಗೆ ಬಂದಿದೆ. ಈ ಎಲ್ಲಾ ನಿಯಮ ಉಲ್ಲಂಘನೆಗಳಿಗಾಗಿ 275 ವರ್ತಕರ ವಿರುದ್ಧ ಮೊಕದ್ದಮೆ ದಾಖಲಿಸಿ, 9,80,000 ರೂ. ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, ದೋಷಪೂರಿತ ಹಾಗೂ ಮುದ್ರೆ ಮಾಡಿಸದ ತೂಕದ ಯಂತ್ರಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಮೈಸೂರಿನಲ್ಲಿ ಸಚಿವ ರಿಜ್ವಾನ್ ತಪಾಸಣೆ – ತಪ್ಪಿತಸ್ಥರಿಗೆ ಕಠಿಣ ಎಚ್ಚರಿಕೆ
ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ತಪಾಸಣೆಯ ನೇತೃತ್ವವನ್ನು ಸ್ವತಃ ಸಚಿವ ರಿಜ್ವಾನ್ ಅರ್ಷದ್ ವಹಿಸಿದ್ದರು. ಹಲವು ಮಳಿಗೆಗಳಿಗೆ ಭೇಟಿ ನೀಡಿದ ಸಚಿವರು, ರೈತರ ಉತ್ಪನ್ನಗಳನ್ನು ಖುದ್ದಾಗಿ ತೂಕ ಮಾಡಿಸಿ ಪರಿಶೀಲಿಸಿದರು. ದೋಷಪೂರಿತವೆಂದು ಕಂಡುಬಂದ ಯಂತ್ರಗಳನ್ನು ಸ್ಥಳದಲ್ಲೇ ಜಪ್ತಿ ಮಾಡಿಸಿದರು. ಮೈಸೂರು ಮಾರುಕಟ್ಟೆಯೊಂದರಲ್ಲೇ 180 ತಪಾಸಣೆಗಳನ್ನು ನಡೆಸಿ 60 ಮೊಕದ್ದಮೆಗಳನ್ನು ದಾಖಲಿಸಲಾಯಿತು.
ನಂತರ ಮಾತನಾಡಿದ ಸಚಿವರು, ರೈತರು ಕಷ್ಟಪಟ್ಟು ಬೆಳೆದು ಮಾರುಕಟ್ಟೆಗೆ ತರುವ ಪ್ರತಿ ಉತ್ಪನ್ನದ ತೂಕವೂ ಪ್ರಾಮಾಣಿಕವಾಗಿ ಹಾಗೂ ನಿಖರವಾಗಿ ಆಗಬೇಕು. ರಾಜ್ಯದ ಎಪಿಎಂಸಿಗಳಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರವೂ ಪಾರದರ್ಶಕವಾಗಿರಬೇಕೆಂಬುದು ಸರ್ಕಾರದ ಸ್ಪಷ್ಟ ಸಂಕಲ್ಪ. ಇನ್ನುಮುಂದೆ ರೈತರಿಗೆ ಮೋಸ ಮಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂತಹ ದಿಢೀರ್ ತಪಾಸಣೆಗಳು ರಾಜ್ಯಾದ್ಯಂತ ಇನ್ನುಮುಂದೆಯೂ ನಿರಂತರವಾಗಿ ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದರು.
ಮಾರುಕಟ್ಟೆಗಳಲ್ಲಿ ಮಾದರಿ ತೂಕದ ಯಂತ್ರಗಳ ವ್ಯವಸ್ಥೆಗೆ ಸೂಚನೆ
ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಶಾಶ್ವತವಾಗಿ ತಡೆಯಲು, ರಾಜ್ಯದ ಎಲ್ಲಾ ಮಾರುಕಟ್ಟೆಗಳಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ವತಿಯಿಂದಲೇ ಒಂದು ಮಾದರಿ ತೂಕದ ಯಂತ್ರವನ್ನು (Model Weighing Machine) ಕಡ್ಡಾಯವಾಗಿ ಇಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಒಂದು ವೇಳೆ ರೈತರಿಗೆ ತೂಕದ ಬಗ್ಗೆ ಸಂಶಯ ಮೂಡಿದರೆ, ಅವರು ಈ ಮಾದರಿ ಯಂತ್ರಗಳಲ್ಲಿ ತಮ್ಮ ಉತ್ಪನ್ನಗಳನ್ನು ಸ್ವತಃ ಮರುಪರಿಶೀಲಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದರು. ಅಲ್ಲದೆ, ಎಲ್ಲಾ ಮಾರುಕಟ್ಟೆಗಳಲ್ಲಿ ಪ್ರಮಾಣಿತ ತೂಕದ ಆಚರಣೆಗಳ ಕುರಿತು ಜಾಗೃತಿ ಮೂಡಿಸುವ ಡಿಸ್ಪ್ಲೇ ಬೋರ್ಡ್ಗಳನ್ನು ಅಳವಡಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
#APMCFraud #WeighingFraud #RizwanArshad #KarnatakaNews #FarmersRights #LegalMetrology #UdayakalaNews #MarketInspection


