Menu

ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು; ಸ್ನೇಹಿತರಿಂದಲೇ ಕೊಲೆ ಶಂಕೆ!

ಬೆಂಗಳೂರು: ರಾಜಧಾನಿಯ ಹೆಬ್ಬಾಳ ಕೆಂಪಾಪುರದಲ್ಲಿ ಜಿಮ್‌ ಟ್ರೈನರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಜಿಮ್‌ನ ವಾರ್ಷಿಕೋತ್ಸವದ ಸಂಭ್ರಮದ ಬೆನ್ನಲ್ಲೇ ಸ್ನೇಹಿತರೇ ಜಗಳವಾಡಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಮೃತನಾದವನು 25 ವರ್ಷ ವಯಸ್ಸಿನ ಜಿಮ್ ಟ್ರೈನರ್ ನಂದನ್ ಎಂದು ಗುರುತಿಸಲಾಗಿದೆ. ಶನಿವಾರ ಜಿಮ್‌ನ ಮೊದಲ ವರ್ಷದ ವಾರ್ಷಿಕೋತ್ಸವವಿತ್ತು. ಕಾರ್ಯಕ್ರಮ ತಡವಾದ ಕಾರಣ “ಬೆಳಗ್ಗೆ ಮನೆಗೆ ಬರುವುದಾಗಿ” ತಾಯಿಗೆ ತಿಳಿಸಿ ನಂದನ್ ತೆರಳಿದ್ದರು. ಆ್ಯನಿವರ್ಸರಿ ಮುಗಿದ ಬಳಿಕ ನಂದನ್ ಹಾಗೂ ಜಿಮ್‌ನ ಇತರೆ ಸಿಬ್ಬಂದಿ ಪರಿಚಿತರೊಬ್ಬರ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿ ನಡೆದ ಗಲಾಟೆಯಲ್ಲಿ ನಂದನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ದೇಹದ ಮೇಲೆ ಗಾಯದ ಗುರುತುಗಳು

ಗಂಭೀರವಾಗಿ ಗಾಯಗೊಂಡಿದ್ದ ನಂದನ್ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಮೃತನ ತಾಯಿಗೆ ಮಗನ ಮೈಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಗಲಾಟೆಯಲ್ಲಿ ಸ್ನೇಹಿತರೇ ಮಾರಕಾಸ್ತ್ರಗಳಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲು

ಈ ಕುರಿತು ಮೃತನ ತಾಯಿ ಮಂಜುಳಾ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಅಸಲಿ ಸತ್ಯ ಏನೆಂಬುದು ಮರಣೋತ್ತರ ಪರೀಕ್ಷಾ ವರದಿ ಹಾಗೂ ತನಿಖೆಯ ಬಳಿಕ ತಿಳಿದುಬರಬೇಕಿದೆ.

#BengaluruCrime #GymTrainerDeath #HebbalKempapura #AmrutahalliPolice #MurderCase #NandanDeath #KarnatakaNews #UdayakalaNews #BangaloreNews2026

—

Related Posts

Leave a Reply

Your email address will not be published. Required fields are marked *