Thursday, November 19, 2026
Menu

ಬೆಳೆ ವಿಮೆ ಹಂಚಿಕೆ ತಾರತಮ್ಯ ಖಂಡಿಸಿ ಶಿವಮೊಗ್ಗದಲ್ಲಿ ರೈತರ ಪ್ರತಿಭಟನೆ

ಉದಯಕಾಲ ನ್ಯೂಸ್‌, ಶಿವಮೊಗ್ಗ: ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತೀವ್ರ ತಾರತಮ್ಯ ಹಾಗೂ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿ ಸಾವಿರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ನಾವು ಪ್ರೀಮಿಯಂ ರೂಪದಲ್ಲಿ ಕಟ್ಟಿದ ಸಾವಿರಾರು ರೂಪಾಯಿ ಹಣ ಕೂಡ ವಾಪಸ್ ಬರುತ್ತಿಲ್ಲ, ಬೆಳೆ ನಷ್ಟ ಅನುಭವಿಸಿದ್ದರೂ ಅತ್ಯಲ್ಪ ಪರಿಹಾರ ನೀಡಿ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದ ಬೆಳೆ ವಿಮೆ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಶರಾವತಿ ಹಿನ್ನೀರು ಭಾಗದ ಕರೂರು, ಬಾರಂಗಿ, ನಿಟ್ಟೂರು ಸೇರಿದಂತೆ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ವ್ಯಾಪ್ತಿಯ ಸಾವಿರಾರು ರೈತರು ಪಾಲ್ಗೊಂಡಿದ್ದರು. ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್‌ನಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಯು ಬಸ್ ನಿಲ್ದಾಣ ಮತ್ತು ಗೋಪಿ ಸರ್ಕಲ್ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಪಂಚಾಯತಿಯಿಂದ ಪಂಚಾಯತಿಗೆ ವ್ಯತ್ಯಾಸ, ಮಳೆಮಾಪನ ಯಡವಟ್ಟು

ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ವಿಮಾ ಕಂಪನಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿನ ಅಸಮಾನತೆಯನ್ನು ಬಯಲಿಗೆಳೆದರು. ವಿಮಾ ಪರಿಹಾರ ಮೊತ್ತವು ಗ್ರಾಮ ಪಂಚಾಯತ್‌ನಿಂದ ಗ್ರಾಮ ಪಂಚಾಯತ್‌ಗೆ ಸಾವಿರಾರು ರೂಪಾಯಿಗಳಷ್ಟು ವ್ಯತ್ಯಾಸವಾಗುತ್ತಿದ್ದು, ಒಂದೇ ಗ್ರಾಮದ ಒಂದೇ ಸರ್ವೇ ನಂಬರ್‌ಗಳಲ್ಲಿರುವ ರೈತರಿಗೂ ಬೇರೆ ಬೇರೆ ರೀತಿಯ ಪರಿಹಾರ ಜಮಾ ಆಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಅತಿ ಹೆಚ್ಚು ಮಳೆ ಬೀಳುವ ಮಲೆನಾಡು ಭಾಗದ ಹೊಸನಗರ, ಸಾಗರ, ತೀರ್ಥಹಳ್ಳಿ ಹಾಗೂ ಶರಾವತಿ ಹಿನ್ನೀರು ವ್ಯಾಪ್ತಿಯಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಎಲೆಚುಕ್ಕಿ, ಕೊಳೆ ರೋಗ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. ಆದರೆ, ಪ್ರತಿ ಎಕರೆಗೆ ಅಥವಾ ಹೆಕ್ಟೇರ್‌ಗೆ ಹತ್ತಾರು ಸಾವಿರ ರೂಪಾಯಿ ಪರಿಹಾರ ಬರಬೇಕಿದ್ದ ಕಡೆ ಕೇವಲ 1,150 ರೂ., 1,550 ರೂ., 2,000 ರೂ. ಅಥವಾ 3,000 ರೂ. ಮಾತ್ರ ಖಾತೆಗಳಿಗೆ ಜಮೆಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಕೆಲವು ಪ್ರಕರಣಗಳಲ್ಲಿ ತಾವು ಪಾವತಿಸಿದ ವಿಮಾ ಕಂತಿನ ಹಣವೇ ವಾಪಸ್ ಬಂದಿಲ್ಲ ಎಂದು ರೈತರು ಕಿಡಿಕಾರಿದರು.

ಮಳೆಮಾಪನ ಕೇಂದ್ರಗಳಲ್ಲಿನ ತಾಂತ್ರಿಕ ದೋಷಗಳು, ಅವೈಜ್ಞಾನಿಕ ಮ್ಯಾಪಿಂಗ್ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಮಳೆ ಸುರಿದ ಪ್ರದೇಶದ ರೈತರಿಗೆ ಕಡಿಮೆ ಪರಿಹಾರ ದೊರೆಯುವಂತಾಗಿದೆ ಎಂದು ರೈತ ಮುಖಂಡರು ದೂರಿದರು. ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯ ಸಮಸ್ಯೆ ಮುಂದುವರಿದಿದ್ದು, ಮಳೆಮಾಪನ ದತ್ತಾಂಶಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು, ಹೋಬಳಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ತಕ್ಷಣವೇ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಿ.ವೈ. ರಾಘವೇಂದ್ರ, ಆರಗ ಜ್ಞಾನೇಂದ್ರ ಬೆಂಬಲ; ಬಿಗಿ ಪೊಲೀಸ್ ಬಂದೋಬಸ್ತ್

ರೈತರ ಈ ಬೃಹತ್ ಪ್ರತಿಭಟನೆಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ರೈತರ ಸಮಸ್ಯೆಗಳನ್ನು ಆಲಿಸಿದ ಜನಪ್ರತಿನಿಧಿಗಳು, ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಅರ್ಹ ರೈತರಿಗೆ ಸಮರ್ಪಕ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಪ್ರಯತ್ನಿಸುವ ಭರವಸೆ ನೀಡಿದರು.

ಪ್ರತಿಭಟನೆ ಹಾಗೂ ರ‍್ಯಾಲಿ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

#Shivamogga #CropInsurance #FarmersProtest #SharavathiBackwaters #BYRaghavendra #AragaJnanendra #MalnadFarmers #InsuranceDisparity #Udayakala #KarnatakaNews

Related Posts

Leave a Reply

Your email address will not be published. Required fields are marked *