ಕೋಲಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್ ಆದ ಖುಷಿಯಲ್ಲಿದ್ದ ಬಾಲಕ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದಾನೆ. ಕಿರಣ್(15) ಮೃತ ಬಾಲಕ. ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ.
ರಘುಪತಿ ಎಂಬವರ ಪುತ್ರನಾದ ಕಿರಣ್ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 239 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದ. ಕಿರಣ್ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ಕಾವೇರಿ ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಮುಳುಗಿ ಮೃತಪಟ್ಟಿರುವ ಘಟನೆ ಏಪ್ರಿಲ್ 21ಎಂದು ನಡೆದಿತ್ತು. ಚಾರ್ವಿ(15), ರಮ್ಯಾ(16) ಮೃತಪಟ್ಟ ವಿದ್ಯಾರ್ಥಿನಿಯರು.
ಹಾಸನ ಅರಸೀಕೆರೆ ತಾಲೂಕಿನ ಎನ್. ಹೊಸಳ್ಳಿ ಗ್ರಾಮದಲ್ಲಿ ಏಪ್ರಿಲ್ 20ರಂದು ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಿಸಲೆಂದು ಹೋದ ಮಾವನೂ ನೀರಲ್ಲಿ ಮುಳುಗಿ ಪ್ರಾಣ ಹೋಗಿತ್ತು. ಪ್ರಭಾಕರ್ (45), ಪ್ರತೀಕ್ (12) ಮೃತಪಟ್ಟಿದ್ದರು.
ಏಪ್ರಿಲ್ 19ರಂದು ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿದ್ದ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ನಡೆದಿತ್ತು. ಗಣೇಶ್ (22) ಮತ್ತು ಇಮ್ರಾನ್ (28) ನೀರು ಪಾಲಾಗಿದ್ದರು.
ಏಪ್ರಿಲ್ 19ರಂದು ಕಾವೇರಿ ನದಿಯಲ್ಲಿ ಮುಳುಗಿ ಆರು ಜನ ಅಸು ನೀಗಿರುವ ಪ್ರಕರಣ ಮೈಸೂರು ಕೆ ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿತ್ತು. ಬೆಂಗಳೂರಿನ ಯಾಸಿನ್(23) ಹಾಗೂ ಹೈಮಾ(13), ಊಟಿಯಬ 38 ವರ್ಷದ ಸೈದ್ ಫಾತಿಮಾ, ಮೈಸೂರಿನ ನೇಹಾ(20), ಉಮೇರ್(7), ಅಫಿಯಾ(20) ಮೃತಪಟ್ಟಿದ್ದರು.


