Wednesday, October 14, 2026
Menu

ಹಾಸನ ಬಳಿಕ ಕೋಲಾರದಲ್ಲಿಯೂ ಅಧಿಕಾರಿಗಳ ಗುದ್ದಾಟ: ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ಜಟಾಪಟಿ

ಉದಯಕಾಲ ನ್ಯೂಸ್, ಕೋಲಾರ: ಹಾಸನದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿಯ ಬೆನ್ನಲ್ಲೇ, ಈಗ ಕೋಲಾರ ಜಿಲ್ಲೆಯಲ್ಲಿ ಐಎಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ. ಅರಣ್ಯ ಇಲಾಖೆ ಒತ್ತುವರಿ ತೆರವು ವಿಚಾರದಲ್ಲಿ ಉಂಟಾಗಿರುವ ಗಂಭೀರ ಭಿನ್ನಾಭಿಪ್ರಾಯ ಸದ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಂಗಳ ತಲುಪಿದೆ.ಕೋಲಾರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಶೀತಲ ಸಮರ ಮುನ್ನೆಲೆಗೆ ಬಂದಿದೆ.

ಉಪಅರಣ್ಯ ಸಂರಕ್ಷಣಾಧಿಕಾರಿಗಳ ಗಂಭೀರ ಆರೋಪ
ಕೋಲಾರ ಉಪಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಅವರು ಜಿಲ್ಲಾಡಳಿತದ ವಿರುದ್ಧ ನೇರ ಆರೋಪಗಳನ್ನು ಮಾಡಿದ್ದಾರೆ. ಒತ್ತುವರಿ ತೆರವು ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಬ್ಬಣಿ ಕಿರು ಅರಣ್ಯಕ್ಕೆ ಸಂಬಂಧಿಸಿದಂತೆ ಪಹಣಿಯಲ್ಲಿ ‘ಅರಣ್ಯ’ ಎಂದಿದ್ದ ದಾಖಲಾತಿಯನ್ನು ‘ಗೋಮಾಳ’ ಹಾಗೂ ಕಂದಾಯ ಇಲಾಖೆಗೆ ಸೇರಿದ ಜಾಗವನ್ನಾಗಿ ಬದಲಾಯಿಸಲಾಗಿದೆ. ಸುಮಾರು 340 ಎಕರೆಯಷ್ಟು ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕಂದಾಯ ಇಲಾಖೆಯ ಹೆಸರಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ನಮ್ಮ ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಜೆ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸ್ಪಷ್ಟನೆ
ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, “ನಾವು ಬಡವರು ಹಾಗೂ ನೊಂದವರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಕೋಲಾರ ತಾಲೂಕಿನ ಅಬ್ಬಣಿ ಕಿರುಅರಣ್ಯ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಸೇರಿದ 619 ಎಕರೆ ಜಾಗವಿದೆ. ಈ ಪೈಕಿ ಕಂದಾಯ ಇಲಾಖೆ ಹೆಸರಿಗೆ ಪಹಣಿ ಮಾಡಲಾಗಿದ್ದ ಸುಮಾರು 340 ಎಕರೆ ಭೂಮಿಯ ಮ್ಯುಟೇಷನ್ ರದ್ದು ಮಾಡಿ ಕೋಲಾರ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಕಾನೂನು ಪ್ರಕಾರವೇ ಕಂದಾಯ ಇಲಾಖೆಯ ಭೂಮಿಯನ್ನು ಮರಳಿ ವಶಕ್ಕೆ ಪಡೆಯುತ್ತಿದ್ದೇವೆ” ಎಂದರು.

ಅಲ್ಲದೆ, “ಅರಣ್ಯ ಇಲಾಖೆ ಅಧಿಕಾರಿಗಳ ಸಾಮೂಹಿಕ ರಜೆ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಯಾವ ಇಲಾಖೆಯಲ್ಲಿ ಯಾವ ಅಡ್ಡಿ ಆತಂಕಗಳಿವೆಯೋ ಅದು ಅವರಿಗೆ ಬಿಟ್ಟ ವಿಚಾರ” ಎಂದು ಸ್ಪಷ್ಟಪಡಿಸಿದರು.

ಸಚಿವರ ಅಂಗಳಕ್ಕೆ ವಿವಾದ
ಒಟ್ಟಾರೆಯಾಗಿ, ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಉಂಟಾಗಿರುವ ಈ ಭಿನ್ನಾಭಿಪ್ರಾಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಅಂತಿಮ ಪರಿಹಾರ ಕಂಡುುಕೊಳ್ಳಬೇಕಿದೆ. ಎರಡು ಇಲಾಖೆಗಳ ನಡುವಿನ ಸಮನ್ವಯ ಕೊರತೆಯನ್ನು ಸರಿಪಡಿಸಿ, ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಮಾತ್ರ ಈ ಗೊಂದಲಕ್ಕೆ ತೆರೆಬೀಳಲಿದೆ.
#UdayakalaNews #KolarNews #KarnatakaPolitics #ForestEncroachment #IASvsIFS #KolarDC #KarnatakaForestDepartment #AdministrativeClash #KolarUpdate

Related Posts

Leave a Reply

Your email address will not be published. Required fields are marked *