ಡಾ.ರಾಜ್‌ಕುಮಾರ್ ಸಮಾಧಿ ಜಮೀನಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯಿಂದ ಶುರುವಾಗಿದ್ದ ವಿವಾದ ಮುಂದುವರಿದಿದ್ದು, ನಟ ಚೇತನ್ ಅಹಿಂಸಾವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಟ ಚೇತನ್ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಸಾರಾ ಗೋವಿಂದು ವಿರುದ್ಧ ದೂರು ನೀಡಿದ್ದರು. ಎಫ್‌ಐಆರ್ ಕೂಡ ದಾಖಲಾಗಿತ್ತು. ಈಗ ಸಾರಾ ಗೋವಿಂದು ನಟ ಚೇತನ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಇಬ್ಬರೂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವೀಡಿಯೊಗಳನ್ನು ಪರಿಶೀಲಿಸಿದ್ದಾರೆ. ಸಾಕ್ಷಿ ಪತ್ತೆ ಬಳಿಕ ನೋಟಿಸ್ ನೀಡಲು ಪೊಲೀಸರು ನಿರ್ಧರಿಸಿದ್ದು, ಬಳಿಕ ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ.
ಏ.24ರಂದು ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ರಾತ್ರಿ ನಟ ಚೇತನ್ ರಾಜ್‌ಕುಮಾರ್ ಸಮಾಧಿ ಬಗ್ಗೆ ಪೋಸ್ಟ್ ಹಾಕಿದ್ದರು. ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದರು. 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


