Menu

ಶಾಸಕರಿಗೆ ಟಿಕೆಟ್ ವಿತರಣೆಗೂ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಕೆ ಶಿವಕುಮಾರ್

“ಅಹಮದಾಬಾದ್ ನಲ್ಲಿ ದೊಡ್ಡ ಕ್ರೀಡಾಂಗಣವಿದೆ, ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡಿರಬೇಕು. ಶಾಸಕರಿಗೆ ಟಿಕೆಟ್ ವಿತರಣೆಗೂ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ” ಎಂದು‌ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ  ಪ್ರತಿಕ್ರಿಯೆ ನೀಡಿದರು. ಶಾಸಕರಿಗೆ ಐಪಿಎಲ್ ಟಿಕೆಟ್ ಬೇಡಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದಿಗೆ ಸ್ಥಳಾಂತರಿಸಲಾಗಿದೆ ಎಂಬ ವಿಚಾರವಾಗಿ ಕೇಳಿದಾಗ, “ಬೇರೆ ಕಡೆ ಶೇ 50 ರಷ್ಟು ಮೀಸಲಿರುತ್ತದೆ” ಎಂದರು‌.

ಬಿಸಿಸಿಐ ಟಿಕೆಟ್ ವಿಚಾರಕ್ಕೆ ಸ್ಥಳಾಂತರ ನಿರ್ಧಾರ ಮಾಡಿದ್ದೇವೆ ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಅವರು ಈ ರೀತಿ ಹೇಳಿಕೆ ನೀಡಲಿ, ನಾನು ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ” ಎಂದು ಡಿಸಿಎಂ ಹೇಳಿದರು.

ದಾವಣಗೆರೆಯಲ್ಲಿ ಮುಸ್ಲಿಂ ನಾಯಕರ ಅಮಾನತನ್ನು ವಾಪಸ್ ಪಡೆಯುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, “ನಾನು ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಪಕ್ಷ ಈ ತೀರ್ಮಾನ ಮಾಡಿದೆ‌. ಸಿಎಂ ರಾಜಕೀಯ ಕಾರ್ಯದರ್ಶಿಯ ಕೈಬಿಡಬೇಕಾದರೆ, ಆ ಬಗ್ಗೆ ಮುಖ್ಯಮಂತ್ರಿಯವರು ಮಾತನಾಡಿದ್ದರು. ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಮಾಹಿತಿ ಇರುತ್ತದೆ. ಪಕ್ಷದ ಪದಾಧಿಕಾರಿಗಳು ಮಾರ್ಗದರ್ಶನ ಮಾಡಿದ್ದಾರೆ. ಪಕ್ಷ ಅವರಿಗೆ ಕೆಲವು ಜವಾಬ್ದಾರಿಗಳನ್ನು ನೀಡಿತ್ತು. ಅದನ್ನು ಅವರು ಸರಿಯಾಗಿ ನಿಭಾಯಿಸಲಿಲ್ಲ ಅದಕ್ಕೆ ಅವರನ್ನು ಆ ಸ್ಥಾನದಿಂದ ಇಳಿಸಲಾಯಿತು. ಜಬ್ಬಾರ್ ಅವರು ತಾವಾಗಿಯೇ ರಾಜೀನಾಮೆ ನೀಡಿದ್ದರು. ಅದನ್ನು ಸ್ವೀಕಾರ ಮಾಡಿದ್ದೇವೆ ಅಷ್ಟೇ” ಎಂದರು.

ಸಿಎಂ, ಡಿಸಿಎಂ ದೆಹಲಿ ಭೇಟಿ ವಿಚಾರ ಕೇಳಿದಾಗ, “ಅವರು (ಹೈಕಮಾಂಡ್) ಕರೆದಾಗ ನಾವು ಹೋಗುತ್ತೇವೆ. ಕರೆಯದೇ ಹೋಗುವುದು ಸರಿಯಲ್ಲ. ಕರೆಯುತ್ತಾರೆ, ಕರೆದಾಗ ನಾವು ಹೋಗುತ್ತೇವೆ” ಎಂದರು.

ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿರುವ ಬಗ್ಗೆ ಕೇಳಿದಾಗ, “ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ಜಾತ್ಯಾತೀತ ಶಕ್ತಿಗಳು ಒಂದಾಗಿ ಇರಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ಎಐಡಿಎಂಕೆ, ಬಿಜೆಪಿಯವರು ಎಷ್ಟೇ ಒತ್ತಡ ಹಾಕಿದರು ಟಿವಿಕೆಯವರು ಮೈತ್ರಿ ಮಾಡಿಕೊಳ್ಳಲಿಲ್ಲ. ಜಾತ್ಯಾತೀತ ಶಕ್ತಿ ಉಳಿಯಲು, ತಮಿಳುನಾಡಿನ ಹಿತಕ್ಕಾಗಿ ನಮ್ಮ ಪಕ್ಷ ತೀರ್ಮಾನ ಮಾಡಿದೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *