ಅರಬ್ಬಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ವಾಣಿಜ್ಯ ಹಡಗಿನ ಸಿಬ್ಬಂದಿಯನ್ನು ಪಾಕಿಸ್ತಾನ ನೌಕಾಸೇನೆ ರಕ್ಷಣಾ ಕಾರ್ಯಾಚರಣೆ ಕೈಗೊಂಡು ರಕ್ಷಿಸಿದೆ.
ಕಾರ್ಯಾಚರಣೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮುದ್ರದಲ್ಲಿ ಸಿಲುಕಿದ್ದ ಭಾರತೀಯ ಹಡಗಿನ ತುರ್ತು ಕರೆಗೆ ಪಾಕಿಸ್ತಾನ ನೌಕಾಪಡೆ ಸ್ಪಂದಿಸಿ ಸಿಬ್ಬಂದಿಗೆ ಆಹಾರ, ವೈದ್ಯಕೀಯ ಮತ್ತು ಇತರ ತುರ್ತು ಸಹಾಯ ಒದಗಿಸಿದೆ. ಎಂವಿ ಗೌತಮ್ ಎಂಬ ಹೆಸರಿನ ಹಡಗು ಒಮಾನ್‌ನಿಂದ ಭಾರತಕ್ಕೆ ತೆರಳುತ್ತಿದ್ದಾಗ ತಾಂತ್ರಿಕ ವೈಫಲ್ಯಗೊಂಡು ಸಮುದ್ರದ ಮಧ್ಯದಲ್ಲಿ ಸಿಲುಕಿಕೊಂಡಿತ್ತು.
ಮುಂಬೈನಲ್ಲಿರುವ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ಇಸ್ಲಾಮಾಬಾದ್‌ನಲ್ಲಿರುವ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಕೇಳಿದೆ. ಪಾಕಿಸ್ತಾನ ನೌಕಾಪಡೆಯು ಆರು ಭಾರತೀಯರು ಮತ್ತು ಒಬ್ಬ ಇಂಡೋನೇಷಿಯನ್ ಸಿಬ್ಬಂದಿಗೆ ರಕ್ಷಣೆ ಕಾರ್ಯಾಚರಣೆ ನಡೆಸಿತು.
ಪಾಕಿಸ್ತಾನ ನೌಕಾಪಡೆಯು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಪಿಎಂಎಸ್ಎಸ್ ಕಾಶ್ಮೀರ್ ಎಂಬ ಹಡಗನ್ನು ನಿಯೋಜಿಸಿತು ಎಂದು ಮೂಲಗಳು ತಿಳಿಸಿವೆ. ಹಡಗನ್ನು ಸ್ಥಿರಗೊಳಿಸಲು ಮತ್ತು ಸಿಬ್ಬಂದಿಯ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಂವಿ ಗೌತಮ್ ಸಿಬ್ಬಂದಿಗೆ ಆಹಾರ ಮತ್ತುವೈದ್ಯಕೀಯ ನೆರವು ಹಾಗೂ ತಾಂತ್ರಿಕ ನೆರವು ಸೇರಿದಂತೆ ತುರ್ತು ಸಹಾಯ ಒದಗಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ ನೌಕಾಪಡೆಗೆ ಸಹಾಯ ಮಾಡಿದೆ. ಮೇ 4 ರಂದು ರಾತ್ರಿ ಗಾಂಧಿನಗರದಲ್ಲಿರುವ ಭಾರತೀಯ ಕೋಸ್ಟ್ ಗಾರ್ಡ್ ಪ್ರಾದೇಶಿಕ ಪ್ರಧಾನ ಕಚೇರಿಗೆ ಎಂವಿ ಗೌತಮ್ ಹಡಗಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿತ್ತು. ಜನರೇಟರ್ ಅಸಮರ್ಪಕ ಕಾರ್ಯದಿಂದಾಗಿ ಮೇ 3ರಂದು ಹಡಗಿನಲ್ಲಿ ವಿದ್ಯುತ್ ವೈಫಲ್ಯ ಕಂಡುಬಂದಿತ್ತು. ಹಡಗು ಪಾಕಿಸ್ತಾನ ಹುಡುಕಾಟ ಮತ್ತು ರಕ್ಷಣಾ ಪ್ರದೇಶದ (ಎಸ್‌ಆರ್‌ಆರ್) ವ್ಯಾಪ್ತಿಯಲ್ಲಿತ್ತು. ಹೀಗಾಗಿ ರಕ್ಷಣೆಗೆ ಅಗತ್ಯವಾದ ಮಾಹಿತಿಯನ್ನು ಪಾಕಿಸ್ತಾ ನೌಕಾಪಡೆಗೆ ಕಳುಹಿಸಲಾಗಿತ್ತು ಎಂದು ಭಾರತ ಹೇಳಿದೆ.
ಈ ಪ್ರದೇಶದಲ್ಲಿದ್ದ ಐಸಿಜಿ ಹಡಗು ರಾಜರತನ್ ಅನ್ನು, ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು, ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ ಹಡಿಗಿನ ಸಿಬ್ಬಂದಿಯನ್ನು ರಕ್ಷಿಸಿ ಅಗತ್ಯ ತಾಂತ್ರಿಕ ನೆರವನ್ನೂ ಒದಗಿಸಿದೆ.


