Saturday, October 31, 2026
Menu

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ 10 ರೂಪಾಯಿ ಡಾಕ್ಟರ್ ಡಾ. ಎಸ್.ಎಂ. ಎಲಿ!

ಉದಯಕಾಲ ನ್ಯೂಸ್, ದಾವಣಗೆರೆ: ವೈದ್ಯಕೀಯ ಕ್ಷೇತ್ರವೆಂದರೆ ಇಂದು ಅಕ್ಷರಶಃ ವ್ಯಾಪಾರವಾಗಿರುವ ಈ ಆಧುನಿಕ ಯುಗದಲ್ಲಿ, ಕಳೆದ ಐದು ದಶಕಗಳಿಂದಲೂ ಕೇವಲ 10 ರಿಂದ 20 ರೂ.ಗಳಷ್ಟೇ ಫೀಸ್ ಪಡೆದು, ಬಡವರ ಹಾಗೂ ಮಧ್ಯಮ ವರ್ಗದವರ ಪಾಲಿಗೆ ಜೀವ ದೇವರೆನಿಸಿರುವ ದಾವಣಗೆರೆಯ ಹಿರಿಯ ವೈದ್ಯ ಡಾ. ಎಸ್.ಎಂ. ಎಲಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಒಲಿದುಬಂದಿದೆ. ವಯೋಸಹಜವಾಗಿ 87 ವರ್ಷ ಕಳೆದಿದ್ದರೂ ಇಂದಿಗೂ ಛಲಬಿಡದೆ ನಿಷ್ಕಾಮ ಕರ್ಮಿಯಾಗಿ ರೋಗಿಗಳ ಸೇವೆ ಮಾಡುತ್ತಿರುವ ಅವರ ನಿಸ್ವಾರ್ಥ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿ ಗೌರವಿಸುತ್ತಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ದಾವಣಗೆರೆ ನಗರದ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ಪುಟ್ಟ ಕ್ಲಿನಿಕ್ ನಡೆಸುತ್ತಿರುವ ಡಾ. ಎಲಿ ಅವರು, 1969ರಿಂದಲೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಪ್ರೊಫೆಸರ್ ಹಾಗೂ ಹೆಚ್‌ಒಡಿಯಾಗಿ (HOD) ಸೇವೆ ಸಲ್ಲಿಸಿ ನಿವೃತ್ತರಾದರೂ, ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿಯೂ ಜನಸೇವೆಯನ್ನೇ ತಮ್ಮ ಬದುಕಿನ ವ್ರತವನ್ನಾಗಿಸಿಕೊಂಡಿದ್ದಾರೆ. ಇವರ ಸರಳತೆ ಮತ್ತು ಮಾನವೀಯತೆಯ ಗುಣವೇ ಇವರನ್ನು ರಾಜ್ಯದ ಮೂಲೆಮೂಲೆಗಳಿಗೂ ಪರಿಚಯಿಸಿದೆ.

ಕೇವಲ 10-20 ರೂ. ಫೀಸ್

ರೋಗಿಗಳಲ್ಲಿ ದೇವರನ್ನು ಕಾಣುವ ಡಾ. ಎಲಿ ಅವರು ಹಣದ ವ್ಯಾಮೋಹವಿಲ್ಲದೆ ಕೇವಲ 10 ಅಥವಾ 20 ರೂಪಾಯಿ ಮಾತ್ರ ಪಡೆದು ಚಿಕಿತ್ಸೆ ನೀಡುತ್ತಾರೆ. ಹಣವಿಲ್ಲದ ಬಡವರಿಗೆ ಉಚಿತವಾಗಿಯೇ ಔಷಧೋಪಚಾರ ಮಾಡುತ್ತಾರೆ. ಬೆಂಗಳೂರು, ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಹರಿಹರ ಸೇರಿದಂತೆ ವಿವಿಧೆಡೆಯಿಂದ ಕಳೆದ 50 ವರ್ಷಗಳಿಂದಲೂ ಇವರ ಬಳಿ ನಿಯಮಿತವಾಗಿ ಬಂದು ಚಿಕಿತ್ಸೆ ಪಡೆಯುವ ಹಳೆಯ ರೋಗಿಗಳ ದೊಡ್ಡ ಬಳಗವೇ ಇದೆ.
ಜ್ವರ, ಶ್ವಾಸಕೋಶ, ಹೃದಯ ಸಂಬಂಧಿ ಹಾಗೂ ನಾನಾ ರೀತಿಯ ಕಾಯಿಲೆಗಳಿಗೆ ಇವರೇ ಸೂಪರ್ ಸ್ಪೆಷಲಿಸ್ಟ್ ಇದ್ದಂತೆ. ಗಂಭೀರ ರೋಗಗಳಿದ್ದರೆ ತಕ್ಷಣವೇ ಸೂಕ್ತ ಆಸ್ಪತ್ರೆಗೆ ಮಾರ್ಗದರ್ಶನ ಮಾಡುತ್ತಾರೆ.

“ಶಕ್ತಿ ಇರುವ ತನಕ ಬಡವರ ಹಾಗೂ ನಿರ್ಗತಿಕರ ಸೇವೆ ಮಾಡುತ್ತೇನೆ, ಹಣಕ್ಕೆ ಆಸೆಪಡುವ ದುರ್ಬುದ್ಧಿ ನನಗಿಲ್ಲ” ಎನ್ನುವ ಇವರ ಮಾತುಗಳು ದುಡ್ಡೇ ದೊಡ್ಡಪ್ಪ ಎಂದು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುವ ಹಾಗೂ ಹಣಕ್ಕಾಗಿ ಜನರನ್ನು ಸುಲಿಯುವ ಇಂದಿನ ಯುವ ವೈದ್ಯರಿಗೆ ಮಾದರಿಯಾಗಿದೆ.

#DrSMHali #KarnatakaRajyotsavaAward #DavangereDoctor #10RupeeDoctor #PoorMansDoctor #UdayakalaNews #KannadaNews

Related Posts

Leave a Reply

Your email address will not be published. Required fields are marked *