Menu

ಇಸ್ಪೀಟು,ಮಟ್ಕಾ ನಿಲ್ಲದಿದ್ದರೆ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ: ಶಿವಗಂಗಾ ಬಸವರಾಜ್ ಎಚ್ಚರಿಕೆ!

ಉದಯಕಾಲ ನ್ಯೂಸ್, ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಇಸ್ಪೀಟು ಹಾಗೂ ಮಟ್ಕಾ ದಂಧೆ ಮಿತಿಮೀರಿದ್ದು, ಇದರಿಂದ ಮನೆ ಮಕ್ಕಳು ಹಾಗೂ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಕ್ರಮ ಚಟುವಟಿಕೆಗಳನ್ನು ಕೂಡಲೇ ತಡೆಯದಿದ್ದರೆ ತಾವೇ ಖುದ್ದಾಗಿ ಎಸ್‌ಪಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿರುವ ಬಗ್ಗೆ ಗಂಭೀರವಾಗಿ ತರಾಟೆಗೆ ತೆಗೆದುಕೊಂಡರು.

ಕುಟುಂಬಗಳ ನಾಶ!

ಜಿಲ್ಲೆಯಾದ್ಯಂತ ಇಸ್ಪೀಟು ಮತ್ತು ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದರಿಂದ ಜನರ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತಿದೆ. ಗ್ಯಾರೆಂಟಿ ಯೋಜನೆಗಳ ಮೂಲಕ ಬರುವ ಹಣವನ್ನೂ ಜೂಜಾಟಕ್ಕೆ ಸುರಿಯುತ್ತಿರುವ ಆತಂಕಕಾರಿ ಪ್ರಕರಣಗಳು ವರದಿಯಾಗಿದ್ದು ಹಲವಾರು ಕುಟುಂಬಗಳು ನಾಶವಾಗಿರುವ ಕುರಿತು ಶಾಸಕರು ಕಳವಳ ವ್ಯಕ್ತಪಡಿಸಿದರು.

ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ

ಈ ಅಕ್ರಮಗಳ ಬಗ್ಗೆ ಎಸ್‌ಪಿಯಿಂದ ಹಿಡಿದು ಡಿಜಿ ಸಲೀಂ ಅವರವರೆಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ, ಬದಲಿಗೆ ದಂಧೆ ಇನ್ನೂ ಹೆಚ್ಚಾಗಿದೆ. ಜಿಲ್ಲೆಯ ಎಸ್‌ಪಿ ಹಾಗೂ ಪೂರ್ವ ವಲಯ ಐಜಿಪಿ ಅವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬಾರದಿದ್ದರೆ, ಇನ್ನೊಂದು ದೂರು ಅಥವಾ ವಿಡಿಯೋ ಬಂದರೆ ತಾವೇ ನೇರವಾಗಿ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆಗೆ ಕೂರುವುದಾಗಿ ಎಚ್ಚರಿಸಿದ ಅವರು, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಚನ್ನಗಿರಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದನ್ನು ಒಪ್ಪಿಕೊಂಡ ಶಾಸಕರು, ಮೋಟಾರ್ ರಿಪೇರಿ ಮಾಡಿಸಿ ಶೀಘ್ರದಲ್ಲೇ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿ ಅಭ್ಯರ್ಥಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾಲಿಗೆ ಬಿದ್ದ ವೈರಲ್ ವೀಡಿಯೊ ಕುರಿತು ಮಾತನಾಡುತ್ತಾ, ಹಿರಿಯರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯವೇ ಹೊರತು ಅದರಲ್ಲಿ ಯಾವುದೇ ಹೊಂದಾಣಿಕೆ ರಾಜಕಾರಣವಿಲ್ಲ ಎಂದು ಸ್ಪಷ್ಟಪಡಿಸಿದರು.

#ShivagangaBasavaraj #DavanagereNews #MatkaGambling #UdayakalaNews #Channagiri #KarnatakaPolice #DavanagereSP #KarnatakaPolitics

Related Posts

Leave a Reply

Your email address will not be published. Required fields are marked *