Saturday, October 31, 2026
Menu

ಹಾಲು, ಮೊಸರು ದರ ಭಾರಿ ಏರಿಕೆ – ಸಾರ್ವಜನಿಕರ ತೀವ್ರ ಆಕ್ರೋಶ!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳವು (KMF) ಬಲವಾದ ಆಘಾತ ನೀಡಿದ್ದು, ದೈನಂದಿನ ಬಳಕೆಯ ಹಾಲು ಹಾಗೂ ಮೊಸರು ದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಮಧ್ಯಮ ವರ್ಗದ ಜನರು ಹಾಗೂ ಗೃಹಿಣಿಯರು, “ದರಗಳು ಈ ರೀತಿ ಏಕಾಏಕಿ ಹೆಚ್ಚಾದರೆ ನಮ್ಮಂಥ ಸಾಮಾನ್ಯರು ಬದುಕುವುದು ಹೇಗೆ?” ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ದಿಢೀರ್ ಬೆಲೆ ಏರಿಕೆ ಹೈರಾಣಾದ ಜನಸಾಮಾನ್ಯರು

ದಿನನಿತ್ಯದ ಬಳಕೆಯ ಪ್ರಮುಖ ವಸ್ತುಗಳ ಬೆಲೆ ಏರಿಕೆಯ ಬಿಸಿ ಮತ್ತೊಮ್ಮೆ ಜನಸಾಮಾನ್ಯರಿಗೆ ತಟ್ಟಿದೆ. ಲೀಟರ್ ಹಾಲಿನ ಬೆಲೆಯಲ್ಲಿ ರೂ.8 ರಷ್ಟು ಹಾಗೂ ಮೊಸರಿನ ಬೆಲೆಯಲ್ಲಿ ಗಣನೀಯ ಹೆಚ್ಚಳ ಮಾಡಲಾಗಿದೆ. ನಾಳೆಯಿಂದ (ನವೆಂಬರ್ 1) ಹೊಸ ದರಗಳು ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ, ಇಂದೇ ಹೆಚ್ಚಿನ ಪ್ರಮಾಣದ ಹಾಲು ಖರೀದಿಸಲು ಗ್ರಾಹಕರು ಮುಗಿಬಿದ್ದಿರುವುದು ಕಂಡುಬಂತು.

ಆದರೆ, ಕೆಲವು ಕಡೆ ಮೊಸರಿನ ದರ ಏರಿಕೆಯ ಕುರಿತು ಮಾರಾಟಗಾರರಿಗೇ ಸ್ಪಷ್ಟ ಮಾಹಿತಿ ಇರಲಿಲ್ಲ. ವಿಶೇಷವಾಗಿ ಮೊಸರಿನ ಬೆಲೆಯಲ್ಲಿ ಏಕಾಏಕಿ ದೊಡ್ಡ ಪ್ರಮಾಣದ ಹೆಚ್ಚಳವಾಗಿರುವುದು ಗ್ರಾಹಕರನ್ನು ಬೆಚ್ಚಿಬೀಳಿಸಿದೆ.

ಸರ್ಕಾರದ ವಿರುದ್ಧ ಗೃಹಿಣಿಯರ ಆಕ್ರೋಶ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹಿಣಿಯೊಬ್ಬರು, “ಮೊಸರು ದರ ಹೆಚ್ಚಳದ ಸುದ್ದಿ ನೋಡಿ ನನಗೆ ಆಘಾತವಾಯಿತು, ಹತ್ತು ನಿಮಿಷ ಸುಮ್ಮನೆ ಕುಳಿತುಕೊಳ್ಳುವಂತಾಯಿತು. ಮಧ್ಯಮ ವರ್ಗದ ಜನರ ಜೇನುಗೂಡಿಗೆ ಕೈಹಾಕಿದಂತೆ ಈ ಬೆಲೆ ಏರಿಕೆಯಿದೆ. ಹಾಲು ರೂ.8, ಮೊಸರು ರೂ.14 ರಷ್ಟು ಏರಿಕೆ ಮಾಡಿದರೆ ನಾವೆಲ್ಲಿಗೆ ಹೋಗಬೇಕು? ಅದ್ಯಾವ ಲೆಕ್ಕಾಚಾರದಲ್ಲಿ ಸರ್ಕಾರ ಮತ್ತು ಕೆಎಂಎಫ್ ಈ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ. ನಮ್ಮ ಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಿನಸಿ ವಸ್ತುಗಳು, ತರಕಾರಿ ಬೆಲೆಗಳ ಏರಿಕೆಯ ಬೆನ್ನಲ್ಲೇ ಈಗ ಹಾಲಿನ ದರವೂ ಏರಿಕೆಯಾಗಿರುವುದು ಬಡ ಹಾಗೂ ಮಧ್ಯಮ ವರ್ಗದವರ ಬದುಕನ್ನು ಮತ್ತಷ್ಟು ಕಷ್ಟಕರವಾಗಿಸಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
#KMFMilkPriceHike #KarnatakaMilkPrice #MiddleClassCrisis #UdayakalaNews #BengaluruNews #MilkAndCurdPrice #KarnatakaNews #RaitaAkrrosha

Related Posts

Leave a Reply

Your email address will not be published. Required fields are marked *