Saturday, October 31, 2026
Menu

ಕಬ್ಬಿಗೆ ರೂ.5,500 ಬೆಲೆಗೆ ಆಗ್ರಹ: ಕಬ್ಬು ಬೆಳೆಗಾರರ ಉಗ್ರ ಪ್ರತಿಭಟನೆ, ಸಂಚಾರ ಅಸ್ತವ್ಯಸ್ತ!

ಉದಯಕಾಲ ನ್ಯೂಸ್,ಬೆಂಗಳೂರು: ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ನಡೆಸಿರುವ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ 15 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ಅನ್ನದಾತರು, ಇದೀಗ ಸರ್ಕಾರದ ಮೇಲೆ ಒತ್ತಡ ಹೇರಲು ರಸ್ತೆಗಿಳಿದಿದ್ದು, ರಾಜ್ಯದ ಹಲವೆಡೆ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ.

ಪ್ರತಿಭಟನೆ ಉಗ್ರ ಸ್ವರೂಪ ತಾಳಿದ್ದು ಬೆಳಗಾವಿ, ಹಾವೇರಿ, ಬಾಗಲಕೋಟೆ ಹಾಗೂ ಚಿಕ್ಕೋಡಿಯಲ್ಲಿ ಪ್ರತಿಭಟನೆ ಕಿಚ್ಚು ಹತ್ತಿಕೊಂಡಿದೆ.ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ತಡೆ, ಬಸ್ ಸಂಚಾರ ಬಂದ್ ಆಗಿರುವ ಕಾರಣ ಸಂಚಾರ ವ್ಯತ್ಯಯ ಉಂಟಾಗಿದೆ. ಪ್ರತಿಭಟನೆಗೆ ಜನ ಬೆಂಬಲ ನೀಡಿದ್ದು ವ್ಯಾಪಾರ ವಹಿವಾಟು ಸ್ಥಗಿತವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಕರಾವಳಿಯಿಂದ ಉತ್ತರ ಕರ್ನಾಟಕದವರೆಗೆ ಭುಗಿಲೆದ್ದ ಆಕ್ರೋಶ

ರಾಜ್ಯ ರೈತ ಸಂಘದ ಕರೆಯಂತೆ ಆರಂಭವಾದ ಈ ಹೋರಾಟಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣವಿದ್ದು, ಅಥಣಿ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ಹಾಗೂ ಸಂಕೇಶ್ವರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಟೈರ್ ಸುಟ್ಟು, ಧರಣಿ ನಡೆಸಿದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್‌ನಲ್ಲಿ ರಸ್ತೆಗೆ ಕಲ್ಲು-ಮುಳ್ಳು ಹಾಗೂ ಟ್ರ್ಯಾಕ್ಟರ್‌ಗಳನ್ನು ಅಡ್ಡವಿಟ್ಟು ಆಕ್ರೋಶ ಹೊರಹಾಕಲಾಯಿತು. ಎಸ್‌ಪಿ ಸಿದ್ಧಾರ್ಥ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಲು ಹರಸಾಹಸ ಪಡಬೇಕಾಯಿತು.

ಹಾವೇರಿ ಹಾಗೂ ಚಿಕ್ಕೋಡಿಯಲ್ಲಿ ಸ್ತಬ್ಧಗೊಂಡ ಜನಜೀವನ

ಹಾವೇರಿ ತಾಲೂಕಿನ ಕಂಚಾರಗಟ್ಟಿ ಕ್ರಾಸ್ ಬಳಿ ಮೊಳಕಾಲ್ಮೂರ-ಶಿರಸಿ ರಾಜ್ಯ ಹೆದ್ದಾರಿಯನ್ನು ತಡೆದು ರೈತರು ಕೆಲಕಾಲ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಮುಖಂಡರ ಕರೆಗೆ ಓಗಟ್ಟು ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಗಿದ್ದು, ವಿದ್ಯಾರ್ಥಿಗಳು ಕೂಡ ಸಾಥ್ ನೀಡಿದ್ದಾರೆ. ಇತ್ತ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಉಗ್ರರೂಪ ತಾಳಲಿದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

#SugarcaneFarmersProtest #KarnatakaBandh #KabbudelagaraProtest #UdayakalaNews #BelagaviFarmers #KarnatakaNews #RaitaSangha #HaveriNews #Chikkodi

Related Posts

Leave a Reply

Your email address will not be published. Required fields are marked *