ಉದಯಕಾಲ ನ್ಯೂಸ್, ಮೈಸೂರು: ದಸರಾ ಮಹೋತ್ಸವ ಮತ್ತು ಅರಮನೆ ಆಡಳಿತದ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಮಾಧ್ಯಮಗಳಿಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಸಚಿವ ಯತೀಂದ್ರ ಸಿದ್ದರಾಮಯ್ಯ ತೀವ್ರ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಮನೆ ಬೋರ್ಡ್, ಅರಮನೆ ಜಾಗ ಹಾಗೂ ಸಂಪೂರ್ಣ ಅರಮನೆ ಸರ್ಕಾರದ ಆಸ್ತಿಯಾಗಿದ್ದು, ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗವನ್ನು ಮಾತ್ರ ನೀಡಲಾಗಿದೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಪ್ರಮೋದಾದೇವಿ ಒಡೆಯರ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಯತೀಂದ್ರ ಅವರು, ಅಂಬಾರಿಯನ್ನು ನಾವು ಯಾವುದೂ ಉಚಿತವಾಗಿ ಪಡೆಯುತ್ತಿಲ್ಲ ಮತ್ತು ಅಂಬಾರಿಗೂ ಸರ್ಕಾರ ಹಣ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು. ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸರ್ಕಾರಕ್ಕೆ ತಿಳಿಸಬಹುದಿತ್ತು, ಆದರೆ ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದರೂ ಯಾವುದೇ ವಿಷಯವನ್ನು ನಮ್ಮ ಗಮನಕ್ಕೆ ತರದೆ ಏಕಾಏಕಿ ಮಾಧ್ಯಮಗಳಿಗೆ ಪತ್ರ ಬರೆದಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ಅವರು ಇದುವರೆಗೆ ಸರ್ಕಾರಕ್ಕೆ ಯಾವುದೇ ಅಧಿಕೃತ ಪತ್ರ ಬರೆದಿಲ್ಲ. ಅಗತ್ಯವಿದ್ದರೆ ಸರ್ಕಾರದಿಂದ ಕೆಲವರನ್ನು ಅವರ ಬಳಿಗೆ ಕಳುಹಿಸಿ ಸಮಸ್ಯೆಗಳೇನಿದ್ದರೆ ಚರ್ಚಿಸಿ ಬಗೆಹರಿಸಲಾಗುವುದು. ಆದರೆ ಅವರು ಹೇಳಿದಂತೆಲ್ಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ರಾಜಮಾತೆಯವರು ಸೂಚಿಸಿರುವಂತೆ ಕೇವಲ ಏಳು ದಿನಗಳ ಕಾಲ ಮಾತ್ರ ದಸರಾ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು, ಸರ್ಕಾರದ ದಸರಾಕ್ಕೂ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ದಸರಾ ಸರ್ಕಾರದ್ದಲ್ಲ ಎಂಬ ರೀತಿಯ ಪದ ಬಳಕೆ ಸರಿಯಲ್ಲ ಎಂದು ಹೇಳಿದರು. ಇನ್ನು ಅಂಬಾರಿ ಹೊರುವ ಆನೆ ಯಾವುದು ಎಂಬುದನ್ನು ಕಾನೂನು ಪ್ರಕಾರ ಅವರಿಗೆ ಮೊದಲೇ ತಿಳಿಸುವ ಅಗತ್ಯವಿಲ್ಲ ಎಂದ ಯತೀಂದ್ರ, ಕೊನೆಯ ಕ್ಷಣದವರೆಗೆ ಮಹೇಂದ್ರ, ಧನಂಜಯ ಹಾಗೂ ಪ್ರಶಾಂತ ಆನೆಗಳ ಆಯ್ಕೆಯಲ್ಲಿ ಉಂಟಾದ ಗೊಂದಲದಿಂದಾಗಿ ತಡವಾಯಿತು ಎಂದು ಸಮರ್ಥಿಸಿಕೊಂಡರು.
ವಜ್ರಮುಷ್ಟಿ ಕಾಳಗದ ವಿಚಾರವಾಗಿ ಮಾತನಾಡಿದ ಅವರು, ಪ್ರಮೋದಾದೇವಿ ಅವರ ಉಲ್ಲೇಖವೇ ಬೇರೆ, ಪೊಲೀಸರು ಹೇಳುತ್ತಿರುವುದು ಬೇರೆಯಾಗಿದೆ. ಜಟ್ಟಿಗಳು ತಡವಾಗಿ ಬಂದರೂ ನಮ್ಮದೇನು ತೊಂದರೆಯಿಲ್ಲ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
#YathindraSiddaramaiah #PramodaDeviWadiyar #MysuruDasara #MysuruPalace #UdaykalaNews #KarnatakaNews #DasaraControversy #AmbariElephant


