Menu

ಶಿಕ್ಷಿತರಿಂದಲೇ ಹೆಚ್ಚು ಜಾತೀಯತೆ, ಸಮಾನ ಸಮಾಜಕ್ಕೆ ವೈಚಾರಿಕ ಶಿಕ್ಷಣ ಅನಿವಾರ್ಯ: ಸಿದ್ದರಾಮಯ್ಯ

ಉದಯಕಾಲ ನ್ಯೂಸ್, ಚಾಮರಾಜನಗರ: ಸಮಾಜದಲ್ಲಿ ಅಸಮಾನತೆ ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಗಣ್ಯಾತಿಗಣ್ಯರು ಬಹಳ ಪ್ರಯತ್ನಿಸಿದರೂ ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. ಹಿಂದೂ ಧರ್ಮದಲ್ಲಿ ಸುಧಾರಣೆ ಸಾಧ್ಯವಾಗದ ಕಾರಣವೇ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರದಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇವತ್ತಿಗೂ ಕೂಡ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳು ಅತ್ಯಂತ ಪ್ರಸ್ತುತವಾಗಿವೆ. ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ದ್ವೇಷರಹಿತ ಸಮಾಜದ ನಿರ್ಮಾಣಕ್ಕಾಗಿ ಎಲ್ಲಾ ದಾರ್ಶನಿಕರು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಶಿಕ್ಷಿತರಿಂದಲೇ ಹೆಚ್ಚು ಜಾತೀಯತೆ – ಸಿದ್ದರಾಮಯ್ಯ ಕಳಕಳಿ

ಸಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅತ್ಯಂತ ಮುಖ್ಯವಾದದ್ದು. ಆದರೆ ತಾನು ಇದುವರೆಗೆ 13 ಚುನಾವಣೆಗಳನ್ನು ಎದುರಿಸಿದ್ದು, ಚುನಾವಣಾ ಸಂದರ್ಭದಲ್ಲಿ ಶಿಕ್ಷಿತರೇ ಹೆಚ್ಚು ಜಾತೀಯತೆ ಮೆರೆಯುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಶೇ. 80ರಷ್ಟು ಶಿಕ್ಷಿತರು ಇದ್ದರೂ ಸಹ, ತಮ್ಮ ತಮ್ಮ ಜಾತಿಗೇ ಮತ ಹಾಕುತ್ತೇವೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಶಿಕ್ಷಣ ಪಡೆದವರೂ ಕೂಡ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಯೋಚಿಸುತ್ತಿಲ್ಲ. ಶಿಕ್ಷಣವೆಂಬುದು ಕೇವಲ ಅಕ್ಷರಜ್ಞಾನವಾಗಬಾರದು, ಅದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯನ್ನು ಬೆಳೆಸಬೇಕು. ಹಾಗಾಗದಿದ್ದರೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬುದ್ಧ ಮತ್ತು ಬಸವಣ್ಣನವರು ಮೌಢ್ಯ ಹಾಗೂ ಕಂದಾಚಾರಗಳನ್ನು ಎಂದಿಗೂ ನಂಬಲಿಲ್ಲ. ಸಂವಿಧಾನ ಜಾರಿಗೆ ಬಂದು 7 ದಶಕಗಳು ಕಳೆದಿದ್ದರೂ ಇಂದಿಗೂ ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಿಕ್ಕಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಅಸಮಾನತೆ ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಬೌದ್ಧ ಬಿಕ್ಕುಗಳಿಗೆ ಮಾಸಾಶನ,ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಮಾತನಾಡಿ, ಕಳೆದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಬೌದ್ಧ ಬಿಕ್ಕುಗಳಿಗೆ ಮಾಸಾಶನ ಜಾರಿಗೊಳಿಸಿದ್ದಾರೆ. ಈ ಉತ್ತಮ ಯೋಜನೆಯು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲೂ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಅಲ್ಲದೆ, ದೇಶದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. 50ರಿಂದ ಶೇ. 70ಕ್ಕೆ ಹೆಚ್ಚಿಸಬೇಕು ಹಾಗೂ ಇದರಲ್ಲಿ ದಲಿತರಿಗೆ ಶೇ. 30ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ತಮ್ಮ ಅನುದಾನದ ಪೈಕಿ ದೇವಾಲಯ ಹಾಗೂ ಸ್ಮಶಾನಗಳಿಗೆ ಅನುದಾನ ನೀಡದೆ, ಬೌದ್ಧ ವಿಹಾರಗಳು ಮತ್ತು ಲೈಬ್ರರಿಗಳಿಗೆ ಮಾತ್ರ ನೀಡುವುದಾಗಿ ತಿಳಿಸಿದರು.

ಬೆಂಗಳೂರು ದಕ್ಷಿಣಕ್ಕೆ ಮುಂದಿನ ಸಮ್ಮೇಳನದ ಜ್ಯೋತಿ ಹಸ್ತಾಂತರ

ಎರಡು ದಿನಗಳ ಕಾಲ ನಡೆದ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಶ್ರೀಲಂಕಾ, ವಿಯೆಟ್ನಾಂ, ಜಪಾನ್, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಸಾವಿರಾರು ಬೌದ್ಧ ಭಿಕ್ಕುಗಳು ಭಾಗವಹಿಸಿ ತೀವ್ರ ಚಿಂತನ-ಮಂಥನ ನಡೆಸಿದರು. ಜತೆಗೆ ವಿವಿಧ ಮಠಾಧೀಶರು, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಗುರುಗಳು ಭಾಗವಹಿಸಿ ಸಮ್ಮೇಳನದ ಮೆರುಗು ಹೆಚ್ಚಿಸಿದರು. ಮಳೆಯ ನಡುವೆಯೂ ನಾಡಿನ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರ ಹರಿದುಬಂದಿತ್ತು. ಆಗಮಿಸಿದ ಎಲ್ಲರಿಗೂ ಮೂರು ದಿನಗಳ ಕಾಲ ದಾಸೋಹ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಂದಿನ ಬೌದ್ಧ ಸಮ್ಮೇಳನವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಸಲಾಗುವುದು ಎಂದು ಘೋಷಿಸಲಾಗಿದ್ದು, ಸಮಾರೋಪದಲ್ಲಿ ಧಮ್ಮ ಜ್ಯೋತಿಯನ್ನು ಬೆಂಗಳೂರು ದಕ್ಷಿಣಕ್ಕೆ ಹಸ್ತಾಂತರಿಸಲಾಯಿತು.
#Siddaramaiah #Buddhism #InternationalBuddhistConference #Chamarajanagar #UdaykalaNews #DrBRAmbedkar #BuddhaBasavaAmbedkar #KarnatakaNews #SocialJustice #ReservationDemand

Related Posts

Leave a Reply

Your email address will not be published. Required fields are marked *