ಸ್ಟಾಕ್ಹೋಮ್: ದಕ್ಷಿಣ ಧ್ರುವದ ‘ಐಸ್ಕ್ಯೂಬ್ ನ್ಯೂಟ್ರಿನೊ ಅಬ್ಸರ್ವೇಟರಿ’ಗೆ (IceCube Neutrino Observatory) ನೀಡಿರುವ ನಿರ್ಣಾಯಕ ಕೊಡುಗೆ ಹಾಗೂ ಖಗೋಳ ಭೌತಿಕ ಮೂಲದ ಉನ್ನತ ಶಕ್ತಿಯ ನ್ಯೂಟ್ರಿನೊಗಳ ಆವಿಷ್ಕಾರಕ್ಕಾಗಿ ವಿಜ್ಞಾನಿಫ್ರಾನ್ಸಿಸ್ ಹಾಲ್ಜೆನ್ (Francis Halzen) ಅವರಿಗೆ 2026 ಸಾಲಿನ ಪ್ರತಿಷ್ಠಿತ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸ್ವೀಡನ್ನ ಸ್ಟಾಕ್ಹೋಮ್ನಲ್ಲಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ನೊಬೆಲ್ ಸರಣಿ ಮತ್ತು ಪ್ರಶಸ್ತಿ ವಿವರಗಳು
ಈ ವರ್ಷದ ನೊಬೆಲ್ ಪ್ರಶಸ್ತಿ ಅನಾವರಣ ವೈದ್ಯಕೀಯ ವಿಭಾಗದ ಪ್ರಶಸ್ತಿಯೊಂದಿಗೆ ಆರಂಭವಾಯಿತು ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬೆಳಕನ್ನು ಬಳಸುವ ಸಾಧನವೊಂದನ್ನು ಅಭಿವೃದ್ಧಿಪಡಿಸಿದ ಮೂವರು ವಿಜ್ಞಾನಿಗಳಿಗೆ ಈ ಪ್ರಶಸ್ತಿ ಸಂದಿದೆ.ಕಳೆದ ವರ್ಷ (2025) ಭೌತವಿಜ್ಞಾನಿಗಳಾದ ಜಾನ್ ಕ್ಲಾರ್ಕ್, ಮೈಕೆಲ್ ಹೆಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಅವರಿಗೆ ವಿದ್ಯುತ್ ಸರ್ಕ್ಯೂಟ್ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಎನರ್ಜಿ ಕ್ವಾಂಟೈಸೇಶನ್ ಆವಿಷ್ಕಾರಕ್ಕಾಗಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.ನೊಬೆಲ್ ಪ್ರಶಸ್ತಿ ವೆಬ್ಸೈಟ್ ಅನ್ವಯ, 1901 ಮತ್ತು 2025ರ ನಡುವೆ ಭೌತಶಾಸ್ತ್ರ ವಿಭಾಗದಲ್ಲಿ 119 ಬಾರಿ, ಒಟ್ಟು 230 ನೊಬೆಲ್ ಪ್ರಶಸ್ತಿಯನ್ನು ವಿಜೇತರಿಗೆ ನೀಡಲಾಗಿದೆ. ಇವರಲ್ಲಿ ಜಾನ್ ಬಾರ್ಡೀನ್ ಅವರು 1956 ಮತ್ತು 1972ರಲ್ಲಿ ಎರಡು ಬಾರಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದ ಏಕೈಕ ಸಾಧಕರಾಗಿದ್ದಾರೆ. ಇದರರ್ಥ ಒಟ್ಟು 229 ವ್ಯಕ್ತಿಗಳು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇಂದು ಭೌತಶಾಸ್ತ್ರ ಪ್ರಶಸ್ತಿಯನ್ನು ಪ್ರಕಟವಾಗಿದ್ದು ನಾಳೆ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಘೋಷಿಸಲಾಗುವುದು. ಗುರುವಾರ ಸಾಹಿತ್ಯ ಪ್ರಶಸ್ತಿ ಪ್ರಕಟಿಸಿದರೆ, ಬಹುನಿರೀಕ್ಷಿತ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸುವ ನಿರೀಕ್ಷೆ ಇದೆ. ಅಕ್ಟೋಬರ್ 12 ರಂದು ಅರ್ಥಶಾಸ್ತ್ರ ಪ್ರಶಸ್ತಿ ಪ್ರಕಟಣೆಯೊಂದಿಗೆ ನೊಬೆಲ್ ಪ್ರಶಸ್ತಿಗಳ ಸರಣಿಯು ಮುಕ್ತಾಯಗೊಳ್ಳಲಿದೆ.
ನೊಬೆಲ್ ಪ್ರಶಸ್ತಿ ಮೊತ್ತ ಹೆಚ್ಚಳ
ಈ ವರ್ಷದ ಪ್ರಶಸ್ತಿ ಮೊತ್ತವು 12 ಮಿಲಿಯನ್ ಸ್ವೀಡಿಷ್ ಕ್ರೊನರ್ (11 ಕೋಟಿ ರೂಪಾಯಿಗೂ ಹೆಚ್ಚು) ಆಗಿದೆ. ಸೋಮವಾರದ ವೈದ್ಯಕೀಯ ಪ್ರಶಸ್ತಿಯಂತೆ, ಒಂದು ನಿರ್ದಿಷ್ಟ ವಿಭಾಗದಲ್ಲಿ ಅನೇಕ ವಿಜೇತರಿದ್ದರೆ, ಈ ಮೊತ್ತವನ್ನು ವಿಜೇತರ ನಡುವೆ ಸಮಾನವಾಗಿ ಹಂಚಲಾಗುತ್ತದೆ.
ಈ ವರ್ಷ ಪ್ರಶಸ್ತಿ ಮೊತ್ತವನ್ನು 1 ಮಿಲಿಯನ್ ಕ್ರೊನರ್ (96 ಲಕ್ಷ ರೂಪಾಯಿಗೂ ಅಧಿಕ) ಹೆಚ್ಚಿಸಲಾಗಿದೆ. ನೊಬೆಲ್ ಫೌಂಡೇಶನ್ನ ಕಾರ್ಯನಿರ್ವಾಹಕ ನಿರ್ದೇಶಕಿ ಹನ್ನಾ ಸ್ಟ್ಯಾರ್ನೆ ಮಾತನಾಡಿ, “ನೊಬೆಲ್ ಪ್ರಶಸ್ತಿಯ ದೀರ್ಘಕಾಲೀನ ಮಹತ್ವವನ್ನು ಎತ್ತಿಹಿಡಿಯಲು ಮತ್ತು ಪ್ರಶಸ್ತಿಯ ಆರ್ಥಿಕ ಭಾಗವು ಕಾಲಾನಂತರದಲ್ಲಿ ತನ್ನ ಮೌಲ್ಯವನ್ನು ಉಳಿದುಕೊಳ್ಳಲು ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
#NobelPrize #PhysicsNobel2026 #FrancisHalzen #IceCubeNeutrino #UdayakalaNews #ScienceNews #Stockholm

