Menu

ಜಟಾಯು ವೀಕ್ಷಣೆಗೆ ಕೇರಳಕ್ಕೆ ಬಂದ ಪ್ರಧಾನಿ ಮೋದಿ

ಉದಯಕಾಲ ನ್ಯೂಸ್, ತಿರುವನಂತಪುರಂ:  ಕನ್ನಡಿಗ ನಟ ಯಶ್‌ ಅಭಿನಯದ ಬಹುನಿರೀಕ್ಷಿತ ರಾಮಾಯಣ ಚಿತ್ರದ ಬಿಡುಗಡೆಯೊಂದಿಗೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಜಟಾಯು ಅರ್ತ್‌ ಸೆಂಟರ್‌ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ. ಬೆಟ್ಟದ ತುದಿಯಲ್ಲಿರುವ ಬೃಹತ್ ಜಟಾಯು ಶಿಲ್ಪವು ಈಗಾಗಲೇ ಪ್ರವಾಸಿಗರು ಹಾಗೂ ಪೌರಾಣಿಕ ಆಸಕ್ತರ ಪ್ರಮುಖ ಆಕರ್ಷಣೆಯಾಗಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಶಿಷ್ಟ ತಾಣಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಕುರಿತು ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಮಹತ್ವದ ಸುಳಿವು ನೀಡಿದ್ದಾರೆ. ಮೊದಲು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಜಟಾಯು ಅರ್ತ್‌ ಸೆಂಟರ್‌ಗೆ ಭೇಟಿ ನೀಡಲಿದ್ದು, ಆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಪ್ರಧಾನಿ ಹಾಗೂ ಕೇಂದ್ರ ಸಚಿವರ ಭೇಟಿಯ ನಿಖರ ದಿನಾಂಕ ಮತ್ತು ಸಮಯ ಇನ್ನೂ ನಿಗದಿಯಾಗಿಲ್ಲ.

ಗಜೇಂದ್ರ ಸಿಂಗ್ ಶೇಖಾವತ್ ಭೇಟಿ, ದೆಹಲಿ ಬಿಯೆನ್ನಾಲೆ ಪ್ರಸ್ತಾಪ

ಪ್ರಸ್ತಾವಿತ ಭೇಟಿಯ ವಿವರಗಳನ್ನು ಹಂಚಿಕೊಂಡ ಸುರೇಶ್ ಗೋಪಿ, ಎರಡು ದಿನಗಳ ಹಿಂದೆ ಗಜೇಂದ್ರ ಸಿಂಗ್ ಶೇಖಾವತ್ ಅವರು ಜಟಾಯು ಅರ್ತ್‌ ಸೆಂಟರ್‌ನ ಸೃಷ್ಟಿಕರ್ತ ರಾಜೀವ್ ಆಂಚಲ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ದೆಹಲಿಯಲ್ಲಿ ನಡೆಯುವ ಬಿಯೆನ್ನಾಲೆಯಲ್ಲಿ ಜಟಾಯು ಶಿಲ್ಪಕ್ಕೆ ಸಂಬಂಧಿಸಿದ ಕಲಾಕೃತಿಯನ್ನು ಪ್ರದರ್ಶಿಸುವ ಆಸಕ್ತಿಯನ್ನೂ ಶೇಖಾವತ್ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೋಪಿ, ಗಜೇಂದ್ರ ಸಿಂಗ್ ಶೇಖಾವತ್ ಅವರು ಜಟಾಯು ಅರ್ತ್‌ ಸೆಂಟರ್‌ಗೆ ಭೇಟಿ ನೀಡಲಿದ್ದಾರೆ ಎಂದು ನನಗೆ ತಿಳಿದಿದೆ. ದೆಹಲಿ ಬಿಯೆನ್ನಾಲೆಯಲ್ಲಿ ಜಟಾಯುವಿನ ಉಪಸ್ಥಿತಿಯನ್ನು ಹೊಂದುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಪ್ರಧಾನಮಂತ್ರಿಯವರ ಗಮನಕ್ಕೂ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಂಸ್ಕೃತಿಕ ಹಾಗೂ ಪೌರಾಣಿಕ ಪರಂಪರೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಗಮನಾರ್ಹವಾಗಿದೆ.

ರಾಮಾಯಣದ ಜಟಾಯುವಿಗೂ ಈ ಬೆಟ್ಟಕ್ಕೂ ಇರುವ ನಂಟೇನು?

ರಾಮಾಯಣದ ಪೌರಾಣಿಕ ಕಥೆಯ ಪ್ರಕಾರ, ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಲಂಕೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಹಾವೀರ ಪಕ್ಷಿ ಜಟಾಯು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸೀತೆಯನ್ನು ರಕ್ಷಿಸಲು ಹೋರಾಡುತ್ತದೆ. ಈ ಘೋರ ಹೋರಾಟದಲ್ಲಿ ರಾವಣನಿಂದ ತೀವ್ರ ಗಾಯಗೊಂಡು ಸೋಲನುಭವಿಸಿದ ಜಟಾಯು, ಕೇರಳದ ಚಡಯಮಂಗಲಂನ ಬೆಟ್ಟದ ತುದಿಯಲ್ಲಿ ಬೀಳುತ್ತದೆ ಎಂಬ ನಂಬಿಕೆಯಿದೆ. ನಂತರ ಶ್ರೀರಾಮಚಂದ್ರನಿಗೆ ಸೀತೆಯ ಅಪಹರಣದ ವಿಚಾರವನ್ನು ತಿಳಿಸಿದ ಜಟಾಯು, ಅದೇ ಸ್ಥಳದಲ್ಲಿ ಕೊನೆಯುಸಿರೆಳೆಯುತ್ತದೆ ಎಂಬ ಪ್ರತೀತಿ ಇದೆ.

ಈ ಪೌರಾಣಿಕ ಹಿನ್ನೆಲೆಯ ಕಾರಣದಿಂದಲೇ ಚಡಯಮಂಗಲಂ ಬೆಟ್ಟದ ಮೇಲಿರುವ ಜಟಾಯು ಶಿಲ್ಪವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪೌರಾಣಿಕ ದೃಷ್ಟಿಯಿಂದ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಜಟಾಯು ಅರ್ತ್‌ ಸೆಂಟರ್‌ ಯೋಜನೆಗೆ 2004ರಲ್ಲಿ ಅನುಮೋದನೆ ದೊರೆತಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ, ಶಿಲ್ಪಿ ಹಾಗೂ ಕಲಾವಿದ ರಾಜೀವ್ ಆಂಚಲ್ ಅವರ ಪರಿಕಲ್ಪನೆ, ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಈ ಪರಿಸರ ಪ್ರವಾಸೋದ್ಯಮ ಯೋಜನೆ ರೂಪುಗೊಂಡಿದೆ. ಪ್ರಕೃತಿ ಸೌಂದರ್ಯ, ಸಾಹಸ ಕ್ರೀಡೆಗಳು ಹಾಗೂ ಪೌರಾಣಿಕ ಕಥಾನಕಗಳ ಸಂಗಮವಾಗಿರುವ ಈ ಕೇಂದ್ರವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಜಟಾಯು ಅರ್ತ್‌ ಸೆಂಟರ್‌ಗೆ ತಲುಪೋದು ಹೇಗೆ

ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಜಟಾಯು ಪಕ್ಷಿ ಶಿಲ್ಪ ವೀಕ್ಷಣೆಗೆ ತೆರಳಲು ವಿಮಾನ, ರೈಲು ಹಾಗೂ ರಸ್ತೆ ಮಾರ್ಗಗಳ ಉತ್ತಮ ಸಂಪರ್ಕ ವ್ಯವಸ್ಥೆ ಲಭ್ಯವಿದೆ

ವಿಮಾನ ಮಾರ್ಗ: ಸಮೀಪದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಜಟಾಯು ಅರ್ತ್‌ ಸೆಂಟರ್‌ಗೆ ಸುಮಾರು 50 ರಿಂದ 55 ಕಿಲೋಮೀಟರ್ ದೂರವಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ಸುಲಭವಾಗಿ ಚಡಯಮಂಗಲಂ ತಲುಪಬಹುದು.
ರೈಲು ಮಾರ್ಗ: ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಲ್ಲಂ ಜಂಕ್ಷನ್ ಆಗಿದೆ. ಇಲ್ಲಿಂದ ಜಟಾಯು ಅರ್ತ್‌ ಸೆಂಟರ್‌ಗೆ ಸುಮಾರು 37 ಕಿಲೋಮೀಟರ್ ದೂರವಿದ್ದು, ರೈಲು ನಿಲ್ದಾಣದಿಂದ ಟ್ಯಾಕ್ಸಿ ಹಾಗೂ ಬಸ್‌ಗಳ ಸೌಲಭ್ಯ ದೊರೆಯುತ್ತದೆ.
ರಸ್ತೆ ಮಾರ್ಗ:ರಸ್ತೆ ಮೂಲಕ ತೆರಳುವವರಿಗೆ ತಿರುವನಂತಪುರಂನಿಂದ ಸುಮಾರು 50 ರಿಂದ 55 ಕಿಲೋಮೀಟರ್, ಕೊಲ್ಲಂನಿಂದ ಸುಮಾರು 37 ಕಿಲೋಮೀಟರ್ ಹಾಗೂ ಕೊಚ್ಚಿಯಿಂದ ಸುಮಾರು 150 ರಿಂದ 160 ಕಿಲೋಮೀಟರ್ ದೂರದಲ್ಲಿ ಜಟಾಯು ಅರ್ತ್‌ ಸೆಂಟರ್‌ ಇದೆ.

ಪ್ರಧಾನಿ ಮೋದಿ ಭೇಟಿಯ ನಿರೀಕ್ಷೆಯ ನಡುವೆ ಜಟಾಯು ಅರ್ತ್‌ ಸೆಂಟರ್‌ ಹಾಗೂ ಕೇರಳದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಉತ್ಸಾಹ ಮೂಡಿದೆ.

#JatayuEarthsCentre #PMModi #SureshGopi #GajendraSinghShekhawat #KeralaTourism #Kollam #Ramayana #RajivAnchal #Thiruvananthapuram #UdayakalaNews

Related Posts

Leave a Reply

Your email address will not be published. Required fields are marked *