ಹನೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಎನ್ಕೌಂಟರ್ಗೆ ಬಲಿಯಾಗಿರುವ ಪ್ರಕರಣದ ತನಿಖೆ ಮುಂದುವರಿದಿದ್ದು, ಎನ್ಕೌಂಟರ್ನಲ್ಲಿ ಸತ್ತಿರುವ ಮೂವರು ಬೇಟೆಗೆ ಹೋಗಿದ್ದವರು, ದನ ಮೇಯಿಸಲು ಹೋಗಿದ್ದವರು ಅಲ್ಲ ಎಂದು ಇಲಾಖೆ ಸಾಕ್ಷಿ ಸಮೇತ ಹೇಳಿದೆ.
ಸ್ಥಳದಲ್ಲಿ ಸಿಕ್ಕ ಬ್ಯಾಗ್, ಮಾಂಸ, ಅಡುಗೆ ಸಾಮಗ್ರಿ ಚಿತ್ರ ಬಿಡುಗಡೆಗೊಳಿಸಿರುವ ಅರಣ್ಯ ಇಲಾಖೆಯು ವನ್ಯಮೃಗದ ಮಾಂಸದಲ್ಲಿ ಗುಂಡಿನ ಗುರುತು ಪತ್ತೆಯಾಗಿರುವುದಾಗಿ ತಿಳಿಸಿದೆ. ಆತ್ಮರಕ್ಷಣೆಗಾಗಿ ತಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದ ಇಲಾಖೆ, ಘಟನಾ ಸ್ಥಳದಲ್ಲಿ ಸಿಕ್ಕಿದ್ದ 34 ಕೆ.ಜಿ ಜಿಂಕೆ ಮಾಂಸ ಹಾಗೂ ಬಂದೂಕುಗಳು ಮತ್ತು ಚಪ್ಪಲಿಯ ಫೋಟೊ ಪ್ರದರ್ಶಿಸಿತ್ತು. ಆದರೆ ಹೊಸ ಚಪ್ಪಲಿಯ ಮೇಲಿದ್ದ ಸ್ಟಿಕ್ಕರ್ ಇದ್ದಿದ್ದು ಕಂಡುಬಂದಿದ್ದ ಕಾರಣ ಸಾಕ್ಷ್ಯಗಳ ಬಗ್ಗೆಯೇ ಅನುಮಾನ ವ್ಯಕ್ತವಾಗಿದ್ದವು. ಇದೇ ವಿಚಾರ ಕರ್ನಾಟಕ, ರಾಜ್ಯ ತಮಿಳುನಾಡು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು.
ಮೂವರ ಸಾವಿನ ಬಳಿಕ ದುಷ್ಕರ್ಮಿಗಳು ಅರಣ್ಯ ಇಲಾಖೆಯನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದಲ್ಲದೆ, ಹತ್ತು ಎಕರೆ ಅರಣ್ಯಕ್ಕೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ. ಹನೂರಿನ ಅರಣ್ಯ ಕಚೇರಿ ಹಾಗೂ ವಸತಿ ಗೃಹಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳು ಎಂಟು ಕಳ್ಳಬೇಟೆ ತಡೆ ಶಿಬಿರ ಸ್ಫೋಟಿಸಿದ್ದು, ಅರಣ್ಯ ಇಲಾಖೆ ಕಚೇರಿ ಬಳಿ ಡಿಎಆರ್ ಪಡೆ ನಿಯೋಜಿಸಲಾಗಿದೆ.


