ಪತಿ ಮನೆಯವರು ಕಿರುಕುಳ ನೀಡಿ, ಮನೆಯಿಂದ ಹೊರ ಹಾಕಿದ್ದಕ್ಕೆ ನೊಂದ ಮಹಿಳೆ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಆಲೂರು ಹೌಸಿಂಗ್ ಬೋರ್ಡ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಗಳು ಮತ್ತು ಮಗುವಿನ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ಮಗು ಆರ್ಯನ್ (2)ನನ್ನು ಕೊಲೆ ಮಾಡಿ ಅನುಪಮಾ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಶ್ರೀನಿವಾಸ್ ತಾಯಿ ಜಯಮ್ಮ ಹಾಗೂ ನಾದಿನಿ ಅನುಶ್ರೀ ಕಿರುಕುಳ ನೀಡುತ್ತಿದ್ದರು ಎಂದು ಅನುಪಮಾ ತಾಯಿ ಆರೋಪಿಸಿದ್ದಾರೆ.
ಸಿಂಗಾಪುರ ಗ್ರಾಮದ ಶ್ರೀನಿವಾಸ್ ಹಾಗೂ ಅನುಪಮಾ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಶ್ರೀನಿವಾಸ್ ತಾಯಿ ಜಯಮ್ಮ ಹಾಗೂ ಅನುಶ್ರೀ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಶ್ರೀನಿವಾಸ್ ತಾಯಿ ಜಯಮ್ಮ ಮಗ ಹಾಗೂ ಸೊಸೆಯನ್ನು ಮನೆಗೆ ಸೇರಿಸಿರಲಿಲ್ಲ. ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಶ್ರೀನಿವಾಸ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾಗಿ ನಾಲ್ಕು ವರ್ಷದ ಬಳಿಕ ಗಂಡು ಮಗು ಹುಟ್ಟಿತ್ತು.
ಶ್ರೀನಿವಾಸ್ ಮನೆಗೆ ಹೋಗದಿದ್ದರೂ ತಾಯಿ ಜಯಮ್ಮ ಹಾಗೂ ಅನುಶ್ರೀ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದ ವಿಚಾರಕ್ಕೆ ಅನುಪಮಾ ಪತಿ ಜೊತೆ ಜಗಳವಾಡುತ್ತಿದ್ದಳು. ನಮ್ಮನ್ನು ನಿಮ್ಮ ತಾಯಿ ಮನೆಗೆ ಸೇರಿಸಿಲ್ಲ. ನೀನು ಅವರೊಂದಿಗೆ ಮಾತನಾಡಬಾರದು ಎಂದು ಜಗಳವಾಡುತ್ತಿದ್ದಳು. ಮಾತನಾಡಿದರೆ ಸಾಯುತ್ತೇನೆ ಎಂದು ಮಗುವನ್ನು ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ದಳು. ಅನುಪಮಾ ತಾಯಿ ಯಶೋಧ, ಅಣ್ಣ ಸಂಜು ರಾಜಿ ಸಂಧಾನ ಮಾಡಿ ತಿಳುವಳಿಕೆ ಹೇಳಿದ್ದರು. ಆದರೆ ಅನುಪಮಾ ಜಗಳ ಮುಂದುವರಿಸಿದ್ದಳು.
ಪತ್ನಿ ವರ್ತನೆಯಿಂದ ಬೇಸತ್ತ ಪತಿ ಶ್ರೀನಿವಾಸ್ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು. ಸಂಧಾನ ಬಳಿಕ ಎರಡು ತಿಂಗಳ ಹಿಂದೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್ಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅನುಪಮಾ ವಾಸವಿರುವ ಮನೆಯ ಪಕ್ಕ ಶ್ರೀನಿವಾಸ್ ಸೈಟ್ ಖರೀದಿಸಿ ಮನೆ ಕಟ್ಟಲು ನಿರ್ಧರಿಸಿದ್ದರು. ಜಯಮ್ಮ ಮಗ ಶ್ರೀನಿವಾಸ್ಗೆ ಫೋನ್ ಮಾಡಿ ಮನೆ ಕಟ್ಟಲು ಒಂದು ಬಿಡಿಗಾಸು ಕೊಡಲ್ಲ. ಆಸ್ತಿಯನ್ನು ಕೊಡುವುದಿಲ್ಲ ಎಂದು ಹೇಳಿ ಸೊಸೆಯನ್ನು ನಿಂದಿಸಿದ್ದರು.
ಇದರಿಂದ ಅನುಪಮಾ ಪತಿ ಜೊತೆ ಜಗಳವಾಡಿ ವಾರದ ಹಿಂದೆ ತಾಳಿ ಬಿಚ್ಚಿಟ್ಟು, ಮಗು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದರು. ಒಂದೆರಡು ಬಾರಿ ಪತಿಗೆ ಕರೆ ಮಾಡಿ ನಾನು ಸಾಯುತ್ತೇನೆ ಎಂದಿದ್ದರು. ಎರಡು ದಿನಗಳ ಹಿಂದೆ ಮನೆಗೆ ಮಗು ಜೊತೆ ಬಂದಿದ್ದರು. ಗುರುವಾರ ತಮ್ಮ ಮನೆಗೆ ಬಂದು ಮಧ್ಯಾಹ್ನ ಪತಿಗೆ ಫೋನ್ ಮಾಡಿ ಸಂಜೆ ಬೇಗ ಮನೆಗೆ ಬಾ ಮಾತನಾಡಬೇಕು ಎಂದು ಹೇಳಿದ್ದರು. ಶ್ರೀನಿವಾಸ್ ಸಂಜೆ ಮನೆಗೆ ಬಂದಾಗ ಬಾಗಿಲು, ಕಿಟಕಿಗಳು ಬಂದ್ ಆಗಿದ್ದವು. ಪತ್ನಿಗೆ ಫೋನ್ ಮಾಡಿದರೆ ಮನೆಯೊಳಗೆ ರಿಂಗ್ ಆಗುತ್ತಿತ್ತು. ನಂತರ ಅನುಪಮಾ ಅಣ್ಣ ಸಂಜುಗೆ ಫೋನ್ ವಿಷಯ ತಿಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಳಗಿನಿಂದ ಹಾಕಿದ್ದ ಬಾಗಿಲು ಲಾಕ್ ಮುರಿದು ಒಳಗೆ ಹೋಗಿ ನೋಡಿಾಗ ಆರ್ಯನ್ನನ್ನು ಕೊಲೆ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಎಸ್ಪಿ ಶುಭನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


