ದೇಶದ ಉತ್ತರದ ರಾಜ್ಯಗಳಲ್ಲಿ ಹರಿಯುವ ಗಂಗಾ, ಯುಮುನಾ ಮತ್ತು ನರ್ಮದಾ ನದಿಗಳ ಜೋಡಣೆ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವ ಅತಿ ದೊಡ್ಡ ಸವಾಲೂ ಎದುರಾಗಲಿಲ್ಲ. ಆದರೆ ದಕ್ಷಿಣ ರಾಜ್ಯಗಳ ಜನತೆಯ ಪಾಲಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿರುವ ಕೃಷ್ಣಾ , ಕಾವೇರಿ ಮತ್ತು ಗೋದಾವರಿ ನದಿಗಳ ಸಂಪೂರ್ಣ ಜೋಡಣೆ ಮತ್ತು ಅನುಸಂಧಾನ ಅಷ್ಟು ಸರಳವಲ್ಲ. ಸುಲಭವೂ ಆಗಿಲ್ಲ.
ದೇಶದ ಗೃಹ ಮಂತ್ರಿ ಅಮಿತ್‌ಶಾ ಸಾರಥ್ಯದಲ್ಲಿ ಚೆನ್ನೈನಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯೊಂದು ನಡೆದಿರುವುದು ಸ್ವಾಗತಾರ್ಹ. ನೆಲ, ಜಲ ಮತ್ತು ಭಾಷೆಯಲ್ಲದೆ ಕ್ಷೇತ್ರಗಳ ಮರುವಿಂಗಡಣೆ ವಿಷಯದಲ್ಲಿ ದಕ್ಷಿಣ ರಾಜ್ಯಗಳ ನಡುವೆ ವಿಭಿನ್ನ ಅನಿಸಿಕೆ ಮತ್ತು ಅಭಿಪ್ರಾಯಗಳಿವೆ.
ದಕ್ಷಿಣದ ಜನತೆಗೆ ಕೃಷ್ಣಾ, ಕಾವೇರಿ ಮತ್ತು ಗೋದಾವರಿ ನದಿಗಳ ಮೇಲೆ ಭಾವನಾತ್ಮಕ ಸಂಬಂಧಗಳೇ ಅಧಿಕ. ಇದನ್ನು ಬದಲಾಯಿಸಲು ಸರ್ಕಾರಗಳಿಂದ ಆಗುವುದೇ? ಕಾವೇರಿ ನದಿಯನ್ನು ಇತರೆ ನದಿಗಳ ಜೊತೆ ಜೋಡಣೆಗೆ ಕರ್ನಾಟಕ ಹಾಗೂ ತಮಿಳುನಾಡಿನ ಜನತೆ ಅಷ್ಟು ಸುಲಭವಾಗಿ ಒಪ್ಪುವರೇ ? ಹದಿನೆಂಟು ವರ್ಷಗಳ ಹಿಂದೆ ಕಾವೇರಿ ನ್ಯಾಯಾಧಿಕರಣ ನೀಡಿರುವ ಅಂತಿಮ ತೀರ್ಪನ್ನು ಕರ್ನಾಟಕವಾಗಲಿ, ತಮಿಳುನಾಡು ಆಗಲಿ ಯಾವುದೇ ತಕರಾರು ಮತ್ತು ಆಕ್ಷೇಪವಿಲ್ಲದೆ ಇದುವರೆಗೂ ಒಪ್ಪಿಕೊಂಡಿಲ್ಲ ! ಆದ್ದರಿಂದ ಕಾವೇರಿ ನೀರು ಹಂಚಿಕೆ ವಿಚಾರ ಬಗೆಹರಿಯದ ಮಹಾ ಕಗ್ಗಂಟು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಇನ್ನು ಕೃಷ್ಣಾ ಕಣಿವೆಯ ವಿಚಾರದಲ್ಲಿ ಹಲವು ಹತ್ತು ಸಿವಿಲ್ ದಾವೆಗಳು ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ. ಈ ವಿಚಾರದಲ್ಲಿಯೂ ಅಷ್ಟೇ. ಆಂಧ್ರ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಯಾವ ಸಹಮತವೂ ಇಲ್ಲ ! ಮಿಗಿಲಾಗಿ ನ್ಯಾಯಾಧಿಕರಣದ ಐ ತೀರ್ಪು ಪ್ರಕಟವಾಗಿ ದಶಕವೇ ಕಳೆದರೂ ಇದರ ಅಂತಿಮ ಅಧಿಸೂಚನೆಗೆ ಚಾತಕ ಪಕ್ಷಿಗಳಂತೆ ಕರ್ನಾಟಕ ಕಾಯುವಂತಾಗಿದೆ. ಹತ್ತು ವರ್ಷಗಳ ಹಿಂದೆ ತೆಲಂಗಾಣ ರಾಜ್ಯವು ಆಂಧ್ರದಿಂದ ವಿಭಜನೆಗೊಂಡ ಬಳಿಕ ಕೃಷ್ಣಾ ಕಣಿವೆಯ ನದಿ ನೀರಿನ ಮರುಹಂಚಿಕೆಯ ಬೇಡಿಕೆಯನ್ನು ತೆಲಂಗಾಣ ಈಗ ಕೇಂದ್ರದ ಮುಂದಿಟ್ಟಿದೆ. ಅಷ್ಟೇ ಅಲ್ಲ. ಇದರ ಸಂಬಂಧ ಕೇಂದ್ರವು ಮತ್ತೊಂದು ನ್ಯಾಯಾಧಿಕರಣವನ್ನು ರಚಿಸಲು ತೆಲಂಗಾಣ ಆಗ್ರಹಿಸಿದೆ.
ಒಟ್ಟಿನಲ್ಲಿ ದೇಶದ ಉತ್ತರದ ರಾಜ್ಯಗಳಲ್ಲಿ ಹರಿಯುವ ಗಂಗಾ, ಯುಮುನಾ ಮತ್ತು ನರ್ವದಾ ನದಿಗಳ ಜೋಡಣೆಗೆ ಕೇಂದ್ರಕ್ಕೆ ಯಾವ ಅತಿ ದೊಡ್ಡ ತೊಡಕೂ ಇದುವರೆಗೆ ಎದುರಾಗಲಿಲ್ಲ ಆದರೆ ದಕ್ಷಿಣದಲ್ಲಿ ಹರಿಯುವ ಕೃಷ್ಣಾ , ಕಾವೇರಿ ಮತ್ತು ಗೋದಾವರಿ ನದಿಗಳ ಸಂಪೂರ್ಣ ಜೋಡಣೆಗೆ ರಾಜ್ಯಗಳು ಒಪ್ಪುವುದು ಸುಲಭವಲ್ಲ. ಇದು ಕೇಂದ್ರ ಸರ್ಕಾರಕ್ಕೂ ಒಂದು ದೊಡ್ಡ ಸವಾಲು. ದೇಶದ ಗೃಹ ಮಂತ್ರಿ ನೇತೃತ್ವದಲ್ಲಿ ನಡೆಯುವ ಸಭೆಗೆ ಮಹತ್ವವಿದೆ.
ಇಂತಹ ಸಭೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಯ ಸಿಂಗಲ್‌ಲೈನ್ ಅಜೆಂಡಾ ಒಂದೇ ಮುಖ್ಯವಾಗುವುದಿಲ್ಲ. ಶತಮಾನದಿಂದಲೂ ದಕ್ಷಿಣದ ರಾಜ್ಯಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೃಷ್ಣಾ- ಕಾವೇರಿ ಜಲ ವಿವಾದಗಳನ್ನು ಬಗೆಹರಿಸಲು ಕೇಂದ್ರದ ನೆರವು ಮತ್ತು ಸೂಚನೆಗಳು ಅತಿ ಮುಖ್ಯವಾಗಿವೆ. ರಾಜಕೀಯ ಕಾರಣಗಳಿಗಾಗಿ ದಕ್ಷಿಣದಲ್ಲಿ ಕ್ಷೇತ್ರಗಳ ಮರುವಿಂಗಡನೆಗೆ ಎನ್‌ಡಿಎ ಸರ್ಕಾರ ಮುಂದಾಗಿದೆ ಎಂಬ ನೇರ ಆರೋಪವಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿತ ರಾಜ್ಯಗಳ ತೀವ್ರ ವಿರೋಧವಿದ್ದು . ಈ ರಾಜ್ಯಗಳ ನಿಲುವುಗಳನ್ನು ಕೇಂದ್ರ ಸರ್ಕಾರ ಬದಿಗಿತ್ತು ಮರುವಿಂಗಡಣೆಗೆ ಮುಂದಾಗಲು ಸಾಧ್ಯವಿಲ್ಲ.


