ಬೆಂಗಳೂರು ನಗರದಲ್ಲಿ ವೀಸಾ, ಪಾಸ್ಪೋರ್ಟ್ ಅವಧಿ ಮೀರಿದ್ದರೂ ಅಕ್ರಮವಾಗಿ 446 ವಿದೇಶಿಗರು ವಾಸವಿದ್ದಾರೆ. ಮೂರು ವರ್ಷಗಳಲ್ಲಿ ದೇಶದೊಳಗೆ ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರ ಮಾಹಿತಿ ಇಲ್ಲ. ಮೂರು ವರ್ಷಗಳಲ್ಲಿ 911 ಅಕ್ರಮ ವಲಸಿಗರನ್ನು ಇಲಾಖೆ ಗುರುತಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗೋಪಿನಾಥ್ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ. ಅಕ್ರಮ ವಲಸಿಗ ನುಸುಳುಕೋರರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಬೆಂಗಳೂರಿನಲ್ಲಿ ವೀಸಾ, ಪಾಸ್ಪೋರ್ಟ್ ಅವಧಿ ಇರುವ ವಿದೇಶಿಗರು 5304 ಜನ ಇದ್ದಾರೆ. ವೀಸಾ, ಪಾಸ್ಪೋರ್ಟ್ ಅವಧಿ ಮೀರಿದ್ದರೂ ಅಕ್ರಮವಾಗಿ 446 ವಿದೇಶಿಗರು ಇದ್ದಾರೆ. ಅಕ್ರಮ ವಲಸಿಗರಲ್ಲಿ ಬಾಂಗ್ಲಾದೇಶ 868, ಪಾಕಿಸ್ತಾನ 20, ನೈಜೀರಿಯಾ 13, ಶ್ರೀಲಂಕಾ 8, ಮಯನ್ಮಾರ್ 01, ಉಗಾಂಡಾದವರು ಒಬ್ಬರು ಇದ್ದಾರೆ. 31 ದೇಶದ 365 ವಿದೇಶಿಗರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯನ್ನು ಗೃಹ ಇಲಾಖೆ ನೀಡಿರುವುದಾಗಿ ಹೇಳಿದ್ದಾರೆ.
ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿಗರು ಹಾಗೂ ವೀಸಾ ಅವಧಿ ಮುಗಿದ ಬಳಿಕವೂ ಉಳಿದುಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿಚಾರ ಮುನ್ನಲೆಗೆ ಬಂದಿದೆ. ವಿದೇಶಿಗರ ವಾಸ್ತವ್ಯ, ದಾಖಲೆಗಳು ಮತ್ತು ಚಟುವಟಿಕೆಗಳ ಮೇಲೆ ನಿಗಾ ಇಡುವುದು ಭದ್ರತಾ ದೃಷ್ಟಿಯಿಂದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಮತ್ತು ಕಾನೂನುಬದ್ಧ ಕ್ರಮ ಕೈಗೊಳ್ಳಲು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.


