ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ತೆರಳಿದ್ದ ಯುವತಿಗೆ ಸೋದರ ಸೇರಿದಂತೆ ಕುಟುಂಬದವರು ವಿಷವಿಕ್ಕಿ ಸಾಯಿಸಿ ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಬೆಳಗಾವಿಯ ಹುಕ್ಕೇರಿ ನದಿಗುಡಿ ಪ್ರದೇಶದಲ್ಲಿ
ನಡೆದಿದೆ.
ಸತ್ತೆವ್ವಾ ಹೆಳವರ್ (25) ಎಂಬ ಯುವತಿಯನ್ನು ಕುಟುಂಬಸ್ಥರೇ ವಿಷ ನೀಡಿ ಹತ್ಯೆ ಮಾಡಿದ್ದಾರೆ. ಸತ್ತೆವ್ವಾ ನದಿಗುಡಿ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ವಿಷಯ ತಿಳಿದ ಕುಟುಂಬ ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೆಳವಿ ಜೊತೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕವೂ ಸತ್ತೆವ್ವಾ ತನ್ನ ಪ್ರಿಯಕರ ಕೃಷ್ಣಾ ಜೊತೆ ಸಂಪರ್ಕದಲ್ಲಿದ್ದು, ಕಳೆದ ಫೆಬ್ರವರಿಯಲ್ಲಿ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ, ಸವದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಹದಿನೈದು ದಿನಗಳ ಹಿಂದೆ ಕುಟುಂಬಸ್ಥರು ಪತ್ತೆ ಹಚ್ಚಿ ಮನೆಗೆ ಕರೆತಂದಿದ್ದರು. ಎರಡು ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು. ಕೃಷ್ಣನನ್ನು ಮರೆಯುವಂತೆ ಸತ್ತೆವ್ವಾಳ ಮೇಲೆ ಒತ್ತಡ ಹಾಕಲಾಗಿತ್ತು. ಆಕೆ ಒಪ್ಪದ ಕಾರಣ ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಲಾಯಿತು. ಬಳಿಕ ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮಾರ್ಚ್ 21ರಂದು ವಿಷ ನೀಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಸತ್ತೆವ್ವಾಳ ಅಣ್ಣ ಶಾನೂರ ಹೆಳವರ್, ಚಿಕ್ಕಪ್ಪ ಪ್ರಕಾಶ್ ಹೆಳವರ್ ಮತ್ತು ಸಂಬಂಧಿ ಮಾಯಪ್ಪ ಹೆಳವಿ ಈ ಕೃತ್ಯ ಎಸಗಿ ಶವವನ್ನು ಸ್ಮಶಾನದಲ್ಲಿ ಸುಟ್ಟು ಹಾಕಿ, ಹಾಸಿಗೆ ಬಟ್ಟೆ ಸೇರಿದಂತೆ ಸಾಕ್ಷಿ ನಾಶಪಡಿಸಿದ್ದಾರೆ. ಸತ್ತೆವ್ವಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪ್ರಿಯಕರ ಕೃಷ್ಣಾ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅಪರಾಧ ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.


