ಶಿಕಾರಿ ವೇಳೆ ಮಿಸ್ಫೈರ್ – ಯುವಕ ದುರಂತ ಸಾವು, ಮೂವರ ವಶ; ತಲೆಮರೆಸಿಕೊಂಡವರಿಗಾಗಿ ಶೋಧ!
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕಾಡಂಚಿನ ಗ್ರಾಮವಾದ ಕಡೇಮನೆಯಲ್ಲಿ ರಾತ್ರಿ ವೇಳೆ ಬೇಟೆಗೆ ತೆರಳಿದ್ದಾಗ ಸಂಭವಿಸಿದ ಮಿಸ್ಫೈರ್ ದುರಂತದಲ್ಲಿ ಯುವಕನೊಬ್ಬ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಯುವಕನನ್ನು ಕಡೇಮನೆ ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಯುವಕರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಗುಂಡು ಹಾರಿಸಿದ ಉಳಿದ ಮೂವರು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.
ಘಟನೆಯ ವಿವರ: ಸೆಪ್ಟೆಂಬರ್ 30ರ ರಾತ್ರಿ ಚೇತನ್ ಸೇರಿದಂತೆ ಒಟ್ಟು ಏಳು ಜನರ ಸ್ನೇಹಿತರ ಗುಂಪು ಅರಣ್ಯ ಪ್ರದೇಶಕ್ಕೆ ಶಿಕಾರಿಗೆ ತೆರಳಿತ್ತು. ಕಾಡಿನಲ್ಲಿ ಪ್ರಾಣಿಯೊಂದರ ಮೇಲೆ ಗುಂಡು ಹಾರಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಿಸ್ಫೈರ್ ಆಗಿ, ಜೊತೆಯಲ್ಲಿದ್ದ ಚೇತನ್ ಅವರ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ.ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಚೇತನ್ನನ್ನು ಜೊತೆಯಲ್ಲಿದ್ದ ಸ್ನೇಹಿತರು ತಕ್ಷಣವೇ ಜಯಪುರ ಆಸ್ಪತ್ರೆಗೆ ಕರೆತಂದರಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಪೋಷಕರ ಆಕ್ರಂದನ – ತನಿಖೆ ಚುರುಕು
ಜಯಪುರ ಆಸ್ಪತ್ರೆಯ ಮುಂಭಾಗದಲ್ಲಿ ಮಗನನ್ನು ಕಳೆದುಕೊಂಡ ಚೇತನ್ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಾಳೆಹೊನ್ನೂರು ಹಾಗೂ ಜಯಪುರ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ತಂದಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಗುಂಡಿನ ಚಕಮಕಿ ಆಕಸ್ಮಿಕವಾಗಿ ನಡೆದ ಮಿಸ್ಫೈರ್ ಅಥವಾ ಉದ್ದೇಶಪೂರ್ವಕವಾಗಿ ನಡೆದ ಕೃತ್ಯವೇ ಎಂಬ ಬಗ್ಗೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಮೂವರ ಬಂಧನದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲಿದೆ.
#Chikkamagaluru #Koppa #BreakingNews #KarnatakaNews #MisfireAccident #HuntingMisfire #CrimeNews #Udayakala #UdayakalaNews #ChikkamagaluruNews


