ಉಕ್ರೇನ್ ಯುದ್ಧದ ಕುರಿತು ಮೋದಿ ಚಿಂತನೆಗೆ ಪುಟಿನ್ ಫಿದಾ, ಅವರ ಬಳಿ ಒಳ್ಳೆಯ ವಿಚಾರಗಳಿವೆ ಎಂದ ರಷ್ಯಾ ಅಧ್ಯಕ್ಷ
ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಂಘರ್ಷವನ್ನು ಕೊನೆಗೊಳಿಸುವ ವಿಷಯವನ್ನು ಪ್ರಧಾನಿ ಮೋದಿ ನಿರಂತರವಾಗಿ ಎತ್ತಿದ್ದಾರೆ ಮತ್ತು ಶಾಂತಿಯ ಮಾರ್ಗವನ್ನು ಕಂಡುಕೊಳ್ಳಲು ಉತ್ತಮ ಸಲಹೆಗಳನ್ನು ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಶ್ಚಿಮಾತ್ಯ ದೇಶಗಳೊಂದಿಗೆ ರಷ್ಯಾದ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಏಷ್ಯಾದ ಪಾಲುದಾರರೊಂದಿಗೆ, ವಿಶೇಷವಾಗಿ ಭಾರತದೊಂದಿಗೆ ಆರ್ಥಿಕ ಮತ್ತು ವ್ಯಾಪಾರ ಸಹಕಾರವನ್ನು ವಿಸ್ತರಿಸಲು ವಿಶೇಷ ಒತ್ತು ನೀಡಿದ್ದಾರೆ. ಗುರುವಾರ ಮಾಸ್ಕೋದಲ್ಲಿ ನಡೆದ ವಾಲ್ಡೈ ಫೋರಂನಲ್ಲಿ ಮಾತನಾಡಿದ ಅವರು, ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಉಕ್ರೇನ್ ಯುದ್ಧದ ಕುರಿತು ಪುಟಿನ್ ಹೇಳಿದ್ದೇನು?
ವಾಲ್ಡೈ ಫೋರಂನಲ್ಲಿ ಮಾತನಾಡಿದ ಪುಟಿನ್, ರಷ್ಯಾದೊಂದಿಗೆ ಉತ್ತಮ ಮತ್ತು ಸ್ನೇಹಪರ ಸಂಬಂಧಗಳನ್ನು ಹೊಂದಿದ್ದರೂ ಸಹ, ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಕುರಿತು ನಿರಂತರವಾಗಿ ಧ್ವನಿ ಎತ್ತುವ ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಮುಖರು ಎಂದು ತಿಳಿಸಿದರು. “ನಮ್ಮ ಉತ್ತಮ ಮತ್ತು ಸ್ನೇಹಪರ ಸಂಬಂಧಗಳ ಹೊರತಾಗಿಯೂ, ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಪ್ರಶ್ನೆಯನ್ನು ನಿರಂತರವಾಗಿ ಎತ್ತುವ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರು” ಎಂದು ಅವರು ಪ್ರಶಂಸಿಸಿದರು.
INSTC ಕಾರಿಡಾರ್ ವಿಸ್ತರಣೆಗೆ ಒತ್ತು
ಇದೇ ವೇಳೆ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಮೂಲಕ ಭಾರತ ಹಾಗೂ ರಷ್ಯಾ ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳನ್ನು ಪುಟಿನ್ ಉಲ್ಲೇಖಿಸಿದರು. ಈ ಯೋಜನೆಯನ್ನು ಮುನ್ನಡೆಸಲು ರಷ್ಯಾ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಭಾರತದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಎಂದರು. ಅಲ್ಲದೆ, ಈ ಕಾರಿಡಾರ್ ಪೂರ್ಣಗೊಳ್ಳುವಲ್ಲಿ ಇರಾನ್ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂಬ ಸ್ಪಷ್ಟ ಸಂದೇಶವನ್ನೂ ಅವರು ರವಾನಿಸಿದರು.
#VladimirPutin #NarendraModi #RussiaIndiaRelations #UkraineConflict #ValdaiForum #UdayakalaNews #InternationalNews #INSTCCorridor #PMModi #Geopolitics


