ಮೈಸೂರು ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗಿ: ಜಯಮಾಲ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗವೇ ಸಕ್ರಿಯವಾಗಿ ಭಾಗವಹಿಸಲಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ವಿಶೇಷ ಪತ್ರಿಕಾಗೋಷ್ಠಿ ನಡೆಸಿ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ, “ಈ ಬಾರಿಯ ದಸರಾ ಉತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಎಲ್ಲಾ ಕಲಾವಿದರು, ತಾಂತ್ರಿಕ ವರ್ಗದವರು ಹಾಗೂ ಚಿತ್ರರಂಗದ ಪ್ರಮುಖರು ಭಾಗವಹಿಸಲಿದ್ದೇವೆ. ಇದೇ ಮೊದಲ ಬಾರಿಗೆ ಇಂತಹ ಬೃಹತ್ ಸಂಭ್ರಮ ಆಯೋಜನೆಯಾಗುತ್ತಿದೆ. ಎಲ್‌ಇಡಿ ಪರದೆಗಳ ಮೂಲಕ ಕನ್ನಡ ಚಲನಚಿತ್ರ ರಂಗ ಬೆಳೆದು ಬಂದ ಹಾದಿಯನ್ನು ಪ್ರದರ್ಶಿಸಲಾಗುತ್ತದೆ,” ಎಂದು ತಿಳಿಸಿದರು. ದಸರಾ ಸಂಭ್ರಮಕ್ಕಾಗಿ ಎರಡು ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಎರಡು ದಿನಗಳ ಕಾಲ ಚಿತ್ರರಂಗದ ಯಾವುದೇ ಚಿತ್ರೀಕರಣ ಇರುವುದಿಲ್ಲ ಎಂದು ಹೇಳಿದರು.
ಈ ಎಲ್ಲಾ ಆಯೋಜನೆಯ ಜವಾಬ್ದಾರಿಯನ್ನು ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ವಹಿಸಲಾಗಿದ್ದು, ಸಂಪೂರ್ಣ ವ್ಯವಸ್ಥೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯೇ ನೋಡಿಕೊಳ್ಳಲಿದೆ. ಈ ಅವಕಾಶ ಕಲ್ಪಿಸಿಕೊಟ್ಟ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಚಿತ್ರರಂಗದ ಪರವಾಗಿ ಧನ್ಯವಾದ ಅರ್ಪಿಸಿದರು.
ಕಲಾವಿದರಿಗೆ ವಿಶೇಷ ವ್ಯವಸ್ಥೆ ಮತ್ತು ಅಂಬಾರಿ ಬಸ್ ವೀಕ್ಷಣೆ
ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, 416ನೇ ವರ್ಷದ ಈ ದಸರಾ ಮಹೋತ್ಸವದಲ್ಲಿ ಕಲಾವಿದರಿಗಾಗಿ ವಿಶೇಷ ‘ಅಂಬಾರಿ ಬಸ್’ ಮೂಲಕ ಅರಮನೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅರಮನೆ ಆವರಣ ಹಾಗೂ ಮುಂಭಾಗದಲ್ಲಿ 150ಕ್ಕೂ ಹೆಚ್ಚು ಕಲಾವಿದರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 15 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ಅಲ್ಲದೆ, 45 ವರ್ಷಗಳಿಂದ ನಡೆಯುತ್ತಿದ್ದ ಚಲನಚಿತ್ರೋತ್ಸವದ ಬದಲು ಕಲಾವಿದರಿಗೆ ಸಹಾಯಧನ ನೀಡಲು ಸಲಹೆ ನೀಡಲಾಗಿದೆ. ಹಿರಿಯ ನಟ ಅನಂತ್‌ನಾಗ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಆಶಯವಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲಾಗುವುದು ಎಂದರು.
ಒಗ್ಗಟ್ಟು ಪ್ರದರ್ಶಿಸಲಿದೆ ಸ್ಯಾಂಡಲ್‌ವುಡ್
ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, “ಮುಖ್ಯಮಂತ್ರಿಗಳು ಸ್ವತಃ ಚಿತ್ರರಂಗಕ್ಕೆ ವಿಶೇಷ ಆಹ್ವಾನ ನೀಡಿದ್ದಾರೆ. ಜಯಮಾಲ ಅವರು ನಟ, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ವೈಯಕ್ತಿಕವಾಗಿ ಕರೆ ಮಾಡಿ ಆಹ್ವಾನಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂಬ ಮಾತುಗಳಿದ್ದವು, ಆದರೆ ನಾವೆಲ್ಲರೂ ಒಂದಾಗಿದ್ದೇವೆ ಎಂಬುದನ್ನು ಈ ದಸರಾ ಸಂಭ್ರಮ ಸಾಬೀತುಪಡಿಸಲಿದೆ,” ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಉಪಾಧ್ಯಕ್ಷರಾದ ಸುಂದರರಾಜ್ ಹಾಗೂ ಕೆ. ಮಂಜು, ಕಾರ್ಯದರ್ಶಿ ಎ. ಗಣೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
#Udayakala #Sandalwood #MysoreDasara #Jayamala #RocklineVenkatesh #KannadaCinema #KannadaNews #KarnatakaDasara #KFCC


