ಆಪತ್ತಿನಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಾಗಿ ಮೋದಿ ಜೊತೆ ಮಾತನಾಡುತ್ತಾ ಪೈಲಟ್ ಸ್ಮಿತ್ ಭಾವುಕ
ನವದೆಹಲಿ: ದುಬೈನಿಂದ ತೆಲವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ವಿಮಾನದಲ್ಲಿ ಸಂಭವಿಸಿದ ಅಚಾನಕ್ ದಾಳಿಯ ವೇಳೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ 180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾಲ್ ನಡೆಸಿ ವಿಚಾರಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ತೋರಿದ ಅಸಾಮಾನ್ಯ ಧೈರ್ಯವನ್ನು ಪ್ರಧಾನಿ ಶ್ಲಾಘಿಸಿದ್ದು, ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುತ್ತಾ ಭಾವುಕರಾದ ಕ್ಯಾಪ್ಟನ್ ಸ್ಮಿತ್, “ನಿಮ್ಮೊಂದಿಗೆ ನೇರವಾಗಿ ಮಾತನಾಡಲು ಅವಕಾಶ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಪ್ರಸ್ತುತ ನನಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ” ಎಂದು ಕೃತಜ್ಞತೆ ಸಲ್ಲಿಸಿದರು.
ಘಟನೆಯ ಕಠಿಣ ಕ್ಷಣಗಳನ್ನು ನೆನಪಿಸಿಕೊಂಡ ಪೈಲಟ್, “ವಿಮಾನದಲ್ಲಿ ಅತಿ ದೊಡ್ಡ ಕಷ್ಟದ ಪರಿಸ್ಥಿತಿ ಬಂದಾಗ ಮತ್ತು ವಿಪರೀತ ನೋವಿನಲ್ಲಿದ್ದಾಗ ನಾನು ಸತತವಾಗಿ ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದೆ. ಭಗವಾನ್ ಹನುಮಂತನೇ ನನಗೆ ಆ ಕ್ಷಣದಲ್ಲಿ ಧೈರ್ಯ ಮತ್ತು ಶಕ್ತಿಯನ್ನು ನೀಡಿದನು” ಎಂದು ಪ್ರಧಾನಿ ಬಳಿ ಹೇಳಿಕೊಂಡಿದ್ದಾರೆ.
ಸಹ-ಪೈಲಟ್ ನಡೆಸಿದ ದಾಳಿಯಿಂದ ತೀವ್ರ ಗಾಯಗೊಂಡಿದ್ದರೂ ಸಹ, ಕ್ಯಾಪ್ಟನ್ ಸ್ಮಿತ್ ಕಾಕ್‌ಪಿಟ್ ಬಾಗಿಲನ್ನು ತೆರೆದು ಪ್ರಯಾಣಿಕರು ಮತ್ತು ಸಿಬ್ಬಂದಿ ನೆರವಿಗೆ ಬರುವಂತೆ ಮಾಡಿದ್ದರು. ಇದರಿಂದಾಗಿ ಮಹಾ ದುರಂತವೊಂದು ತಪ್ಪಿದಂತಾಗಿದೆ. ಇಡೀ ದೇಶವೇ ನಿಮ್ಮ ಸಾಹಸಕ್ಕೆ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ಮೋದಿ ಈ ವೇಳೆ ಹಾರೈಸಿದ್ದಾರೆ.
#SmitMachchhar #PMModi #Flydubai #HanumanChalisa #IndianPilot #Bravery #AviationSafety #KannadaNews #Udayakala


