ನಾಗರಹೊಳೆಯ ಒಂದೇ ಸ್ಥಳದಲ್ಲಿ 3 ಹುಲಿಗಳು! ಪ್ರಕೃತಿಯ ವಿಸ್ಮಯ ಘಟನೆ
ದಸರಾ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಜನರ ದಂಡೇ ಹರಿದುಬರುತ್ತಿದೆ. ಇದೇ ವೇಳೆ ನಾಗರಹೊಳೆ ಕಾಡಿನಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಒಂದೇ ದಿನದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಹುಲಿಗಳ ದರ್ಶನ ಸಿಕ್ಕಿದ್ದು, ಅಪರೂಪದ ವನ್ಯಜೀವಿ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಹುಲಿಯಿರುವ ಸ್ಥಳದಡಿ ಇನ್ನೊಂದು ಹುಲಿ ಇರುವುದಿಲ್ಲ. ಆದರೆ ಇಲ್ಲಿ ವಿಚಿತ್ರ ಸಂಗತಿ ನಡೆದಿದೆ.
ಎಚ್.ಡಿ. ಕೋಟೆ ತಾಲೂಕಿನ ನಾಗರಹೊಳೆ ಕಾಕನಕೋಟೆ ಭಾಗದಲ್ಲಿ ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರು ಕಾಡಿನ ಹಸಿರಿನ ನಡುವೆ ಸಾಗುತ್ತಿದ್ದಾಗ ಮೊದಲ ಹುಲಿ ಕಾಣಿಸಿಕೊಂಡಿದೆ. ಸಫಾರಿ ವಾಹನ ಟೈಗರ್ ಟ್ಯಾಂಕ್ ಪ್ರದೇಶದ ಬಳಿ ಸಾಗುತ್ತಿದ್ದ ವೇಳೆ ಗಂಭೀರ ನಡಿಗೆಯಲ್ಲಿ ಸಾಗುತ್ತಿದ್ದ ಹೆಣ್ಣು ಹುಲಿ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.
ಹುಲಿಗಳ ದರ್ಶನದ ಥ್ರಿಲ್ ಪಡೆದ ಪ್ರವಾಸಿಗರು
ಮೊದಲ ಹುಲಿಯ ದರ್ಶನದಿಂದಲೇ ಪ್ರವಾಸಿಗರು ರೋಮಾಂಚನಗೊಂಡಿದ್ದರು. ಆದರೆ ಸಫಾರಿ ಮುಂದುವರಿದು ನಾಂಜಿಕಟ್ಟೆ ವ್ಯಾಪ್ತಿಗೆ ತಲುಪುತ್ತಿದ್ದಂತೆ ಮತ್ತೊಂದು ಅಚ್ಚರಿ ಎದುರಾಗಿದೆ. ಒಂದರ ಹಿಂದೆ ಒಂದರಂತೆ ಮತ್ತೆರಡು ಹುಲಿಗಳು ಕಾಣಿಸಿಕೊಂಡಿದ್ದು, ಸಫಾರಿ ವಾಹನದ ಸಮೀಪವೇ ನಿರ್ಭೀತಿಯಿಂದ ಸಂಚರಿಸಿವೆ. ಹುಲಿಗಳು ವಾಹನದ ಎದುರು ಕಾಣಿಸಿಕೊಂಡ ಕ್ಷಣದಲ್ಲಿ ಪ್ರವಾಸಿಗರಲ್ಲಿ ಒಂದೆಡೆ ಕುತೂಹಲ ಮತ್ತು ಮತ್ತೊಂದೆಡೆ ರೋಮಾಂಚನ ಮೂಡಿದೆ. ಕಾಡಿನ ರಾಜನನ್ನು ಅಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದರಿಂದ ಸಫಾರಿ ಪ್ರವಾಸಿಗರು ಈ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಮುಂದಾಗಿದ್ದಾರೆ.
ಅಪರೂಪದ ಸನ್ನಿವೇಶ
ಈ ಅಪರೂಪದ ವನ್ಯಜೀವಿ ಕ್ಷಣಗಳನ್ನು ಹಿರಿಯ ಛಾಯಾಗ್ರಾಹಕ ಜಿ.ಎಸ್. ರವಿಶಂಕರ್ ತಮ್ಮ ಕ್ಯಾಮೆರಾದಲ್ಲಿ ದಾಖಲಿಸಿದ್ದಾರೆ. ಸಫಾರಿ ವಾಹನದ ಎದುರು ಹುಲಿಗಳು ರಾಜಗಾಂಭೀರ್ಯದಿಂದ ಕಾಣಿಸಿಕೊಂಡ ದೃಶ್ಯಗಳು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡಿವೆ. ನಾಗರಹೊಳೆ ಕರ್ನಾಟಕದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲೊಂದಾಗಿದ್ದು, ಕಾಕನಕೋಟೆ ಸೇರಿದಂತೆ ವಿವಿಧ ಸಫಾರಿ ವಲಯಗಳಲ್ಲಿ ಪ್ರವಾಸಿಗರಿಗೆ ಹುಲಿ, ಆನೆ, ಚಿರತೆ ಸೇರಿದಂತೆ ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ನೋಡುವ ಅವಕಾಶವಿದೆ.
ರಜೆಗಳ ಹಿನ್ನೆಲೆ, ಪ್ರವಾಸಿಗರ ದಂಡು
ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ನಾಗರಹೊಳೆ ಕಡೆಗೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಅಂತಹ ಪ್ರವಾಸಿಗರಿಗೆ ಒಂದೇ ಸಫಾರಿಯಲ್ಲಿ ಮೂರು ಹುಲಿಗಳ ದರ್ಶನ ಸಿಕ್ಕಿರುವುದು ವಿಶೇಷ ಅನುಭವವಾಗಿದೆ. ಹೀಗಾಗಿ ದಸರಾ ಮತ್ತು ಹಬ್ಬದ ರಜೆಯಲ್ಲಿ ನಾಗರಹೊಳೆ ಪ್ರವಾಸ ಕೈಗೊಂಡಿದ್ದವರಿಗೆ ಈ ಮೂರು ಹುಲಿಗಳ ದರ್ಶನವೇ ಪ್ರವಾಸದ ಪ್ರಮುಖ ಆಕರ್ಷಣೆಯಾಗಿದೆ.
#Nagarhole #TigerSafari #MysoreDasara #KarnatakaTourism #NagarholeNationalPark #WildlifeSafari #TigerSighting #Kakanakote #UdayakalaNews #TravelKarnataka


