Menu

ಹುಚ್ಚನಂತೆ ವರ್ತಿಸುತ್ತಿದ್ದಿ, ನಾನಿಲ್ಲದಿದ್ದರೆ ನೀನು ಜೈಲಲ್ಲಿ ಇರುತ್ತಿದ್ದೆ: ನೆತನ್ಯಾಹು ವಿರುದ್ಧ ಟ್ರಂಪ್‌ ಆಕ್ರೋಶ

ನೀನು ಹುಚ್ಚನಂತೆ ವರ್ತಿಸುತ್ತಿದ್ದಿ, ನಾನು ಇರದೆ ಇದ್ದರೆ ಈಗಾಗಲೇ ಜೈಲಿನಲ್ಲಿರುತ್ತಿದ್ದೆ. ನಿನ್ನನ್ನು ನಾನು ಉಳಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ನಿನ್ನಿಂದ ಇಸ್ರೇಲ್ ಮೇಲಿನ ಜಾಗತಿಕ ಬೆಂಬಲವೂ ಕುಸಿಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ನೆತನ್ಯಾಹು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಅಂತರರಾಷ್ಟ್ರೀಯ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ ಎಂದು ವರದಿ ಹೇಳಿದೆ. ಲೆಬನಾನ್‌ನಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ತೀವ್ರಗೊಳ್ಳುತ್ತಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಬಿರುಕು ಮತ್ತೊಮ್ಮೆ ಬಹಿರಂಗಗೊಂಡಿದೆ.

ಟ್ರಂಪ್ ಹಾಗೂ ನೆತನ್ಯಾಹು ನಡುವೆ ದೂರವಾಣಿಯಲ್ಲಿ ಮಾತುಕತೆ ವೇಳೆ ನೆತನ್ಯಾಹು ವಿರುದ್ಧ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರ ಸಂಘಟನೆಯ ವಿರುದ್ಧ ಇಸ್ರೇಲ್ ಕೆಲವು ವಾರಗಳಿಂದ ನಿರಂತರ ದಾಳಿಗಳನ್ನು ನಡೆಸುತ್ತಿದೆ. ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿರುವ ಹಿಜ್ಬುಲ್ಲಾ ನಿಯಂತ್ರಿತ ಪ್ರದೇಶಗಳ ಮೇಲೆ ವಾಯುದಾಳಿ ನಡೆಸಲು ಹಾಗೂ ದಕ್ಷಿಣ ಲೆಬನಾನ್‌ನಲ್ಲಿ ಭೂ ಕಾರ್ಯಾಚರಣೆಯನ್ನು ವಿಸ್ತರಿಸಲು ಇಸ್ರೇಲ್ ನಿರ್ಧರಿಸಿತ್ತು. ಮತ್ತೊಂದೆಡೆ ಅಮೆರಿಕ ಇರಾನ್ ಜೊತೆ ಶಾಂತಿ ಮಾತುಕತೆಗಳನ್ನು ನಡೆಸುತ್ತಿತ್ತು. ಇರಾನ್ ಬೆಂಬಲಿತ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ವ್ಯಾಪಕ ದಾಳಿಗಳು ಈ ರಾಜತಾಂತ್ರಿಕ ಪ್ರಯತ್ನಗಳನ್ನು ಹಾಳುಮಾಡಬಹುದು ಎಂಬ ಆತಂಕ ಅಮೆರಿಕಕ್ಕಿದೆ. ಈ ಕಾರಣಕ್ಕೆ ಟ್ರಂಪ್ ನೆತನ್ಯಾಹು ಜೊತೆ ನೇರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಇಸ್ರೇಲ್‌ನ ನಡೆಗಳು ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತ್ಯೇಕಗೊಳಿಸುತ್ತಿವೆ ಮತ್ತು ಅಮೆರಿಕದ ಹಿತಾಸಕ್ತಿಗಳಿಗೂ ಹಾನಿ ಉಂಟುಮಾಡುತ್ತಿವೆ ಎಂದು ಟ್ರಂಪ್‌ ನೆತನ್ಯಾಹುಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಜ್ಬುಲ್ಲಾ ನಿರಂತರವಾಗಿ ರಾಕೆಟ್ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿರುವ ಕಾರಣ ಪ್ರತಿಕ್ರಿಯಿಸುವುದು ಅನಿವಾರ್ಯವಾಗಿದೆ ಎಂದು ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ. ಹಿಜ್ಬುಲ್ಲಾ ದಾಳಿಗಳಿಗೆ ಪ್ರತಿಕ್ರಿಯೆ ಅಗತ್ಯವಿದ್ದರೂ ಇಸ್ರೇಲ್ ಕೈಗೊಂಡಿರುವ ಕ್ರಮಗಳು ಅತಿಯಾದುದು ಎಂದು ಅಮೆರಿಕದ ಅಧಿಕಾರಿಗಳ ಅಭಿಪ್ರಾಯವಾಗಿದೆ.

ನಾಗರಿಕರ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು, ಒಂದು ಗುರಿಯನ್ನು ಹೊಡೆಯಲು ವ್ಯಾಪಕ ಪ್ರಮಾಣದ ವಾಯುದಾಳಿಗಳನ್ನು ನಡೆಸುತ್ತಿರುವುದು ಅಮೆರಿಕದ ಕಳವಳಕ್ಕೆ ಕಾರಣವಾಗಿದೆ. ಈ ಮಾತುಕತೆ ಬಳಿಕ ಬೈರೂತ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಕೆಲವು ದಾಳಿಗಳನ್ನು ಇಸ್ರೇಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ. ಹಿಜ್ಬುಲ್ಲಾ ಕೂಡ ಮಧ್ಯವರ್ತಿಗಳ ಮೂಲಕ ಇಸ್ರೇಲ್ ಮೇಲಿನ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಮ್ಮತಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಆದರೆ ನೆತನ್ಯಾಹು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ತನ್ನ ಭದ್ರತೆಯನ್ನು ಆದ್ಯತೆಯಾಗಿ ಪರಿಗಣಿಸುತ್ತದೆ ಎಂದು ಹೇಳಿರುವ ಅವರು, ಹಿಜ್ಬುಲ್ಲಾ ದಾಳಿಗಳನ್ನು ನಿಲ್ಲಿಸದಿದ್ದರೆ ಲೆಬನಾನ್‌ನಲ್ಲಿನ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಗತ್ಯವಿದ್ದರೆ ಬೈರೂತ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೂ ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *