Saturday, October 24, 2026
Menu

ಯುಪಿ ಚುನಾವಣೆಯಲ್ಲಿ 200 ಸೀಟುಗಳಿಗೆ ಕಾಂಗ್ರೆಸ್‌ ಬೇಡಿಕೆ – ಕೇವಲ 70 ಸ್ಥಾನ ಎಂದ ಸಮಾಜವಾದಿ ಪಕ್ಷ!

ಉದಯಕಾಲ ನ್ಯೂಸ್, ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಸರತ್ತು ಶುರುವಾಗಿದ್ದು, ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷ ನಡುವೆ ಬಿರುಸಿನ ಚರ್ಚೆ ಆರಂಭವಾಗಿದೆ. ಮೈತ್ರಿಕೂಟದ ಮೂಲಕ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಬಹುದು ಎಂದು ನಂಬಿರುವ ಕಾಂಗ್ರೆಸ್ ಪಕ್ಷವು ಬರೋಬ್ಬರಿ 175 ರಿಂದ 200 ಸ್ಥಾನಗಳಿಗೆ ಬೇಡಿಕೆ ಇಟ್ಟು ಕ್ಷೇತ್ರಗಳ ಪಟ್ಟಿಯನ್ನು ಸಲ್ಲಿಸಿದೆ.

ಕಾಂಗ್ರೆಸ್ ಬೇಡಿಕೆ ಮತ್ತು ಎಸ್‌ಪಿ ಪ್ರತಿಕ್ರಿಯೆ

ಒಟ್ಟು 403 ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಮೈತ್ರಿಕೂಟದಡಿ ಸ್ಪರ್ಧಿಸಲು ಕಾಂಗ್ರೆಸ್‌ 175 ರಿಂದ 200 ಸ್ಥಾನಗಳ ಪಟ್ಟಿಯನ್ನು ಸಮಾಜವಾದಿ ಪಕ್ಷದ ನಾಯಕರೊಂದಿಗೆ ಹಂಚಿಕೊಂಡಿದೆ ಎಂದು ಯುಪಿ ಕಾಂಗ್ರೆಸ್‌ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ತಿಳಿಸಿದ್ದಾರೆ. ಕಾಂಗ್ರೆಸ್‌ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಸ್ಥಾನಗಳನ್ನು ಕೇಳಿರುವುದು ಸಮಾಜವಾದಿ ಪಕ್ಷದಲ್ಲಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವಷ್ಟು ರಾಜಕೀಯ ಸಂಘಟನೆ ಹಾಗೂ ಶಕ್ತಿ ಕಾಂಗ್ರೆಸ್‌ಗೆ ಇದೆಯೇ ಎಂದು ಎಸ್‌ಪಿ ನಾಯಕರು ಪ್ರಶ್ನಿಸಿದ್ದು, ಸದ್ಯ ಕೇವಲ 60 ರಿಂದ 70 ಸ್ಥಾನಗಳನ್ನು ಮಾತ್ರ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.

ಅಖಿಲೇಶ್ ಯಾದವ್ ನಿಲುವು ಏನು?

ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಚುನಾವಣೆಯಲ್ಲಿ ಸ್ಪರ್ಧಿಸಲು ‘ಗೆಲ್ಲುವ ಸಾಮರ್ಥ್ಯ’ ಒಂದೇ ಏಕೈಕ ಮಾನದಂಡ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ನಮ್ಮೆಲ್ಲರ ಆದಮ್ಯ ಗುರಿಯಾಗಿದ್ದು, ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸಿಕೊಂಡು ಪರಿಣಾಮಕಾರಿಯಾಗಿ ಮುನ್ನಡೆಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

1989ರಿಂದಲೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಾಬಲ್ಯ ಕುಸಿಯುತ್ತಾ ಬಂದಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು (2017ರಲ್ಲಿ 7 ಸ್ಥಾನ). ಆದರೆ, ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿಯು ಕಾಂಗ್ರೆಸ್‌ಗೆ ಹೊಸ ವಿಶ್ವಾಸ ತಂದುಕೊಟ್ಟಿದೆ. ಯುಪಿಯಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದರೆ, ಎಸ್‌ಪಿ 37 ಸ್ಥಾನಗಳನ್ನು ಪಡೆದು ಮಿಂಚಿತ್ತು. ಇದರ ಪರಿಣಾಮವಾಗಿ ಬಿಜೆಪಿ 33 ಸ್ಥಾನಗಳಿಗೆ ಕುಸಿದಿತ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳ ಬೇಡಿಕೆ ಇಟ್ಟಿದೆ.
#UPElections2027 #CongressVsSP #AkhileshYadav #UttarPradeshPolitics #UdayakalaNews #IndiaAlliance #UPAssemblyPolls #CongressDemand

Related Posts

Leave a Reply

Your email address will not be published. Required fields are marked *