ಆನ್‌ಲೈನ್ ಹೂಡಿಕೆ ಮೂಲಕ ಸುಲಭವಾಗಿ ಹಣ ಗಳಿಸಬಹುದು ಎಂಬ ಮಹಿಳೆಯ ಮಾತಿಗೆ ಮರುಳಾಗಿ ಬೆಂಗಳೂರಿನ ೫೦ ವರ್ಷದ ವ್ಯಕ್ತಿಯೊಬ್ಬರು 5.95 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಹೂಡಿಕೆ ಮಾರ್ಗದರ್ಶನ ನೀಡುವ ನೆಪದಲ್ಲಿ ಪರಿಚಯವಾದ ಮಹಿಳೆಯೊಬ್ಬರ ಮಾತು ನಂಬಿದ ವ್ಯಕ್ತಿ ನಕಲಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಮತ್ತು ಪತ್ನಿಯ ಖಾತೆಯಿಂದ ಹಣ ಹೂಡಿಕೆ ಮಾಡಿದ್ದರು.
ಸಂತ್ರಸ್ತ ವ್ಯಕ್ತಿಗೆ ಸ್ನೇಹಿತರು ‘PU Prime’ ಎಂಬ ಆನ್‌ಲೈನ್ ಟ್ರೇಡಿಂಗ್ ವೇದಿಕೆಯ ಬಗ್ಗೆ ಹೇಳಿದ್ದರು. ಆನ್‌ಲೈನ್ ಹೂಡಿಕೆ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ಹುಡುಕಿದ್ದರು. ಅಲ್ಲಿ ‘ಶಿಲ್ಪಾ ಶಿವಕುಮಾರ್’ ಎಂಬ ಮಹಿಳೆಯ ಪರಿಚಯವಾಗಿ ಲಾಭ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದರು.
ವಂಚಕರು ನಕಲಿ ಡ್ಯಾಶ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತದ ಲಾಭ ತೋರಿಸಿದ್ದರು. ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂಪಡೆಯಲು ಅವಕಾಶ ನೀಡಿ ನಂಬಿಕೆ ಹುಟ್ಟಿಸಿದ್ದರು. ನಂತರ ಹಂತಹಂತವಾಗಿ 5.95 ಕೋಟಿ ರೂಪಾಯಿ ಹೂಡಿಕೆ ಮಾಡಿಸಿದ್ದರು. ಒಂದು ಹಂತದಲ್ಲಿ ಖಾತೆಯಲ್ಲಿ 50 ಕೋಟಿ ರೂಪಾಯಿ ಲಾಭ ದಾಖಲಾಗಿತ್ತು. ಹಣ ಹಿಂಪಡೆಯಲು ಹೋದಾಗ ವಂಚನೆಯ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ಸಂತ್ರಸ್ತರು ಮೇ ೨೮ರಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.


